ಅನುದಿನ ಕವನ-೧೦೨೫, ಕವಿಯಿತ್ರಿ:ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಉಡುತಡಿಯ ನೆಲದ
ಸಿರಿಬಳ್ಳಿಯಲಿ ಕುಡಿಯೊಡೆದವಳಿವಳು.
ಕೌಶಿಕನ ಹಂಬಲದ
ವಿಷಸಸಿಗೆ ಬಿಸಿನೀರೆರೆದು ನೆಡೆದಳು.

ಉಟ್ಟ ಬಟ್ಟೆಯ ಸೆಳೆಯಬಹುದಲ್ಲದೇ
ತೊಟ್ಟ ನಿರ್ವಾಣವ ಸೆಳೆಯಲುಂಟೇ?
ಎಂದು ಅಡ್ಡ ನಿಂತ ಸಾಮಾಜಿಕ
ಬಂಧುಗಳಿಗೆ ಸಡ್ಡು ಹೊಡೆದವಳು.

ಹಾದಿಬದಿಯ ಅವಹೇಳನಗಳಿಗೆ
ಪಂಚೇಂದ್ರಿಯಗಳ ಮುಚ್ಚಿ ಹಿಡಿದು
ಮಹಾದೇವಿ ಕಲ್ಯಾಣ ಸೇರಿದುದು
ಅರಳರಳುವ ಅರಳು ಮೊಗ್ಗಾಗಿ.

ಕಿನ್ನರಿ ಬೊಮ್ಮಯ್ಯನ ವಿವೇಚನಾ ನುಡಿ
ಅಲ್ಲಮ ಪ್ರಭುದೇವರ ಆಲೋಚನಾ ನಡೆ
ಬಸವಾದಿ ಶರಣರ ಅಕ್ಕರೆಯ ಹಾರೈಕೆ
ಅಕ್ಕ ನಾಗಮ್ಮಾದಿ ಶರಣೆಯರ ಮಮತೆಯ ಆರೈಕೆ
ಅರಳಿಸಿತವಳ ಸೌರಭದ ಸುಮವಾಗಿ.

ನಂಬಿದವರ ಮುಡಿಗೆ ಹೂವ ತಹೆನಲ್ಲದೇ
ಹುಲ್ಲ ತಾರೆನೆಂದು ಕಲ್ಯಾಣ ಮನಗಳಿಗೆ
ವಿದಾಯ ಹೇಳಿದವಳು ಚನ್ನ ಮಲ್ಲಿಕಾರ್ಜುನನ
ಮುಡಿಯೇರೆ ಹಂಬಲಿಸಿ ಶ್ರೀಶೈಲದ ಕಡುಕಷ್ಟದ
ಹಾದಿ ಹಿಡಿದವಳು ಜನಮನವ ಗೆದ್ದಳು,
ಚನ್ನ ಮಲ್ಲಿಕಾರ್ಜುನನ ಭವ್ಯತೆಯೊಳಗೊಂದಾದಳು
ಅಂತರಂಗದ ದಿವ್ಯ ಪರಿಮಳವೇ ತಾನಾಗಿ.

ಬೆಳೆದಿರುವಳು ಇಂದು ಜಗಕೆ ಅಕ್ಕಳಾಗಿ,
ಅಕ್ಕರೆಯ ಮಮತಾಮಯಿ ಸಕ್ಕರೆಯಾಗಿ,
ಸ್ವಾಭಿಮಾನದ ತೇಜೋಮೂರ್ತಿಯಾಗಿ,
ಸತ್ಸಂಕಲ್ಪದ ವಿವೇಚನೆಯ ಮಡುವಾಗಿ,
ಇಬ್ಬನಿಯ ಒಡೆಯನ ವಾತ್ಸಲ್ಯದ ತವನಿಧಿಯಾಗಿ,
ಅಕ್ಕ ಮಹಾದೇವಿಯೇ ದಿವ್ಯ ಸಂಕಲ್ಪವಾಗಿ!

ಮಂಜುಳಾ ಹುಲ್ಲಹಳ್ಳಿ

-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
*****