ಬಳ್ಳಾರಿ,ಅ.27:ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮುನ್ನಡೆಸಿದ ಮೊದಲ ಭಾರತೀಯರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಅವರು ಒಬ್ಬರು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಏಳುವಂತೆ ಮಾಡಿ, ಅನೇಕ ಮಹಿಳೆಯರಲ್ಲಿ ಧೈರ್ಯ ತುಂಬಿದ ವೀರ ಮಹಿಳೆಯೂ ಆದ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು ಎಂದೇ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಮುಖಂಡರಾದ ಶಿವಕುಮಾರ, ಕಲ್ಲುಕಂಭ ಪಂಪಾಪತಿ, ಡಾ.ಸೋಮಶೇಖರ ರೆಡ್ಡಿ, ಹಾವಿನಾಳ ಶರಣಪ್ಪ, ಅಸುಂಡಿ ನಾಗರಾಜ, ಕೋಳೂರು ಚಂದ್ರೇಗೌಡ, ಮುಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ಮೆರವಣಿಗೆ, ಕಲಾತಂಡ: ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಗಮನಸೆಳೆದವು.
ನಗರದ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ನೂತನ ಜಿಲ್ಲಾಡಳಿತ ಭವನದಿಂದ ಆರಂಭವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಚಯ ಆವರಣದ ಹೊಂಗಿರಣದ ವೇದಿಕೆ ಕಾರ್ಯಕ್ರಮಕ್ಕೆ ತಲುಪಿತು.
———