ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ

ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ತಾಪಂ ಕಚೇರಿ ಆವರಣದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸಾ ಕಾರ್ಯಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಾತನಾಡಿ ಪ್ರತಿನಿತ್ಯ ಸಾರ್ವಜನಿಕ ಸಂಪರ್ಕದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದಲ್ಲಿ ಅವರು ಕರ್ತವ್ಯದ ಸಂದರ್ಭದಲ್ಲಿ ಜನರ ಪ್ರಾಣ ಮತ್ತು ಆಸ್ತಿಯನ್ನು ಕಾಪಾಡಲು ಹೆಚ್ಚು ಅನೂಕುಲವಾಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಜನರ ಮಧ್ಯೆ ಸದಾ ಇರುವ ಅಧಿಕಾರಿಗಳಿಗೆ ಜಿಲ್ಲಾಡಳಿತವು ಈ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.
ಈ ತರಬೇತಿಯನ್ನು ಜಿಲ್ಲಾಡಳಿತದಿಂದ ಎಲ್ಲಾ ತಾಲೂಕುಗಳಲ್ಲಿ ನಡೆಸಲಾಗಿದ್ದು, ಕೊನೆಯದಾಗಿ ಈ ತರಬೇತಿಯ ಕಾರ್ಯಗಾರವನ್ನು ಬಳ್ಳಾರಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಸಲಾಗುತ್ತಿದೆ ಎಂದರು.
ಪ್ರೋಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಅವರು ಮಾತನಾಡಿ,
ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ, ಬರಗಾಲ ಮತ್ತು ಕಾರ್ಖಾನೆಯಿಂದ ಆಗುವ ಅನಾಹುತಗಳ ಬಗ್ಗೆ ಎಲ್ಲಾ ರೀತಿಯಿಂದ ಅರಿವು ಮೂಡಿಸಲು ಈ ತರಬೇತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೋಬೆಷನರಿ ಕೆಎಎಸ್ ಅಧಿಕಾರಿ ಪರಿಣಿಕ, ವಿಪತ್ತು ನಿರ್ವಹಣ ತರಬೇತಿಯ ನೋಡಲ್ ಅಧಿಕಾರಿ ಪರಮೇಶ ಮತ್ತಿತರರು ಇದ್ದರು.
ಭಾರತೀಯ ರೆಡ್‍ಕ್ರಾಸ್ ಕಾರ್ಯದರ್ಶಿ ಎಂ.ಎ.ಷಕೀಬ್ ತರಬೇತಿ ನೀಡಿದರು.