ಪುನೀತ್ ರಾಜಕುಮಾರ್ ಅಮರ -ಸೀನಾ‌ ಪ್ರೇಮನಗರ್, ಬೆಂಗಳೂರು, ಚಿತ್ರಕೃಪೆ:ಬಣ್ಣ ಆರ್ಟ್ಸ್‌, ಬೆಂಗಳೂರು

ಪುನೀತ್ ರಾಜಕುಮಾರ್ ಭೌತಿಕವಾಗಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳಾಯಿತು. ಡಾ.‌ರಾಜಕುಮಾರ್, ಅಂಬರೀಷ್ ಅವರ ಸಮಾಧಿಗಳಿರುವ ಕಂಠೀರವ ಸ್ಟುಡಿಯೋದ ಅಂಗಳದಲ್ಲೇ ಪುನೀತ್ ಅವರ ಸಮಾಧಿಯೂ ಇದೆ.

ರಾಜಕುಮಾರ್ ಅವರ ಸಮಾಧಿಯ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕ ನಿರ್ಮಾಣವಾದ ನಂತರ ರಾಜ್ಯದ ಮೂಲೆ ಮೂಲೆಗಳಿಂದ ಅದನ್ನು ನೋಡಲು ಜನರು ಬರುತ್ತಿದ್ದರು ಮತ್ತು ಈಗಲೂ ಬರುತ್ತಿದ್ದಾರೆ.
ಆದರೆ ಪುನೀತ್ ರಾಜಕುಮಾರ್ ಅವರ ಸಾವು ಇಡೀ ರಾಜ್ಯವೇ ಏನೋ ಕಳೆದುಕೊಂಡಂತಾಗಿ ನಾಡಿಗೆ ನಾಡೇ ಪರಿತಪಿಸಿದ್ದು ಆತನ ಮೇಲೆ ಜಾತಿ ಧರ್ಮ ಮೇಲು ಕೀಳುಗಳ ಭೇದವಿಲ್ಲದೆ ಇಟ್ಟಿದ್ದ ಪ್ರೀತಿ ಎಂತಹದ್ದು ಎಂಬುದನ್ನು ತೋರಿಸುತ್ತದೆ.

ವಾರಕ್ಕೆ ಎರಡು ಬಾರಿಯಾದರೂ ಕಂಠೀರವ ಸ್ಟುಡಿಯೋದ ಮುಂದೆ ಹಾದು ಹೋಗುತ್ತೇನೆ. ರಾಜ್ ಕುಮಾರ್ ಅವರ ನಿಧನದ ನಂತರ ಕೇವಲ ಶನಿವಾರ, ಭಾನುವಾರ, ಮತ್ತು ಇತರ ರಜಾದಿನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳವಾಗಿದ್ದ ಸ್ಟುಡಿಯೋ ಈಗ ಪ್ರತಿದಿನ ಜನಜಂಗುಳಿಯಿಂದ ಕೂಡಿರುವ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಈಗಲೂ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಅಲ್ಲಿಗೆ ದಿನಂಪ್ರತಿ ಬರಲಾರಂಭಿಸಿದ್ದಾರೆ. ಅದರಲ್ಲೂ ಬಡ ಮತ್ತು ಕೆಳಮಧ್ಯಮ ವರ್ಗದವರ ಸಂಖ್ಯೆ ಹೆಚ್ಚು. ಎರಡು ಬಾರಿ ನಾನು ಒಳಗೆ ಹೋದಾಗ ಕ್ರೈಸ್ತ ಮತ್ತು ಮುಸ್ಲಿಂ ಅಭಿಮಾನಿಗಳ ದಂಡು ಕಂಡು ಅಚ್ಚರಿಗೊಂಡಿದ್ದೇನೆ. ಒಬ್ಬ ನಟ ಹೀಗೆ ಜಾತಿ ಧರ್ಮಗಳನ್ನು ಮೀರಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದು ಸಾಮಾನ್ಯ ಸಂಗತಿಯಲ್ಲ.
ಕಂಠೀರವ ಸ್ಟುಡಿಯೋದ ಮುಂಭಾಗದಲ್ಲಿ ಕನಿಷ್ಠ ಮೂವತ್ತು ಬೀದಿ ಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿ ಸಿನಿತಾರೆಯರ ಫೋಟೋಗಳು, ಫ್ಯಾನ್ಸಿ ಸ್ಟೋರ್ ವಸ್ತುಗಳು, ಬಟ್ಟೆ ಬರೆ, ತಂಪು ಕನ್ನಡಕ ಮುಂತಾದವನ್ನು ಮಾರುವವರು ಖಾಯಂ ಮಾರಾಟಗಾರಗಿದ್ದಾರೆ. ರಾಜಧಾನಿ ವಿವಿಧೆಡೆಯಿಂದ ತುಂಬಾ ಮಂದಿ ಆಟೋ ರಿಕ್ಷಾ ಬಾಡಿಗೆಗೆ ಪಡೆದು ಬರುತ್ತಾರೆ. ಆಟೋದವರಿಗೂ ಪುನೀತ್ ಈ ರೀತಿ ಸಹಾಯ ಮಾಡುತ್ತಿದ್ದಾರೆ.
ಕರ್ನಾಟಕದ ಜನ ಮನದಲ್ಲಿ ನೆಲೆಸಿದ್ದಾರೆ. ಈ ಮೂಲಕ ಪುನೀತ್ ಅಮರರಾಗಿದ್ದಾರೆ.

ಚಿತ್ರಕೃಪೆ:ಬಣ್ಣ ಆರ್ಟ್ಸ್‌, ಬೆಂಗಳೂರು

-ಸೀನಾ ಪ್ರೇಮನಗರ್, ಬೆಂಗಳೂರು
—–