ಅನುದಿನ ಕವನ-೧೦೩೨, ಕವಿಯಿತ್ರಿ: ಹೇಮಲತಾ ಮೂರ್ತಿ, ಬೆಂಗಳೂರು

ಕಾಲಲ್ಲಿ ಹೊಸಕುತಿದ್ದ
ಕ್ರೌರ್ಯದ ಜಗತ್ತು, ಎಟುಕಲಾರದ
ನನ್ನನ್ನೂ ತಲೆ ಎತ್ತಿ ನೋಡಿ
ಕೈ ಕೈ ಹೊಸಕುತಿತ್ತು

**
ಹೃದಯ ಮಾತಾಡುವಾಗ
ಮಿದುಳು ಮಲಗಿತ್ತು
ಮಿದುಳು ಮಾತನಾಡತೊಡಗಿತು ನೋಡು
ಹೃದಯ ಸ್ತಬ್ಧವಾಯಿತು

**
ಸಿಹಿ ಕಂಡೊಡನೆ ಇರುವೆ
ಮುತ್ತುವುದಂತೆ ಮೋಸದ ಜಗತ್ತು
ವಿಷದ ಗುಳಿಗೆಗೆ ಸಿಹಿಯ ಲೇಪಿಸಿತ್ತು..

**
ಹೃದಯಕ್ಕೂ ಮಿದುಳಿಗೂ
ಪ್ರೇಮ ಉಂಟಾಯಿತು
ಹಡೆದ ಮಕ್ಕಳಲ್ಲಿ  ಕೆಲವಕ್ಕೆ ಹೃದಯ,
ಕೆಲವಕ್ಕೆ ಮಿದುಳಷ್ಟೇ ಇದ್ದದ್ದೂ
ಸೋಜಿಗವೆನಿಸಲಿಲ್ಲ

**
ಅವನ ಎದೆಯ ಮೇಲಿನ
ಹಚ್ಚೆಯಾಗಷ್ಟೇ ಉಳಿದೆ  ಒಳಗೆ
ಮೂಡಿದ ಮತ್ತೊಂದು ಹೆಜ್ಜೆ
ಅರಿವಿಗೆ ಬರಲಿಲ್ಲ.

-ಹೇಮಲತಾ ಮೂರ್ತಿ, ಬೆಂಗಳೂರು

*****