2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಕವಿ ಸತೀಶ್ ಕುಲಕರ್ಣಿ ಅವರಿಗೆ ಅಭಿನಂದನೆಗಳು.🍀💐
ಶ್ರೀಯುತರ ಜನಪ್ರಿಯ ಕವನ ‘ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ’ ಇಂದು (ಅ.31) ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಸಂಭ್ರಮಿಸುತ್ತದೆ.
(ಸಂಪಾದಕರು)
ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು
ಕಟ್ಟೇ ಕಟ್ಟುತ್ತೇವ
ಒಡೆದ ಮನಸುಗಳ, ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ, ನಾವು ಮನಸ ಕಟ್ಟುತ್ತೇವ
ಜಾತಿಯಿಲ್ಲದ, ಭೀತಿಯಿಲ್ಲದ
ನಾಡ ಕಟ್ಟುತೇವ
ಕುಲವೆನ್ನದ ಮನುಷ್ಯ ಕುಲದ
ಹಾಡ ಬರೆಯುತೇವ, ಈ ನೆಲದ ಹಾಡ ಬರೆಯುತೆವ
ಗೋಳಿಲ್ಲದ, ಗುಂಡಿಲ್ಲದ
ನಾಡ ಕಟ್ಟುತೇವ
ನೂರು ಮನಸಿನ, ಕೋಟಿ ಕನಸಿನ
ಹಾಡ ಬರೆಯುತೇವ, ಈ ನೆಲದ ಹಾಡ ಬರೆಯುತೆವ
ಸಮಸಮಾಜದ ಕನಸ ಹೊತ್ತು
ನಾವು ಕುಂಡ ತುಳಿಯುತೇವ
ರಕ್ತಗಾಲಿನ ನಮ್ಮ ಪಾಲಿನ
ಹಾಡಬರೆಯುತೆವ, ಈ ನೆಲದ ಹಾಡು ಬರೆಯುತೇವ.
– ಸತೀಶ ಕುಲಕರ್ಣಿ, ಹಾವೇರಿ