ಅನುದಿನ‌ ಕವನ-೧೦೩೭, ಕವಿ: ಮಹಾದೇವ ಎಸ್.ಪಾಟೀಲ ರಾಯಚೂರು, ಕವನದ ಶೀರ್ಷಿಕೆ: ಭಾವದಿಂದ ನಿರ್ಭಾವದಡೆಗೆ….

ಭಾವದಿಂದ ನಿರ್ಭಾವದಡೆಗೆ….

ಒಡಲೊಳಗಿನ ಕಿಚ್ಚು ದಹಿಸಿ
ಭವದ ದೋಣಿಯ ತೊರೆದು
ನಿರ್ಭಾವದಡೆಗೆ…
ನಿರ್ಭೀತಿಯಿಂದ ಸಾಗಬೇಕು

ಅನುಗಾಲ ಉರಿದುರಿದು
ಕರ್ಪುರದಂತೆ ಕರಗಿ
ಭ್ರಮೆಯ ಅಳಿದು
ನಿರಾಕಾರ ನಿರ್ಗುಣದಲಿ
ಅಸೀಮರೂಪಿಯಾಗಿರಬೇಕು

ಅರಿತು ಅರಿಯದಂತೆ
ಮನೋಜ್ಞವಾಗಿದ್ದು
ಸಮತೆಯ ಸಕಾರದಲಿ
ಪಾರಮಾರ್ಥಿಕ ದೃಷ್ಟಿ ಇರಬೇಕು

ಧರ್ಮಗಳು ಅಳಿದು
ಪ್ರೇಮವು ಉಳಿದು
ಜಗದ ತುಂಬೆಲ್ಲಾ
ಸತ್ಯದ ಪ್ರಭಂಜನ ಬೀಸಬೇಕು

ರಾಗ ದ್ವೇಷವನ್ನು
ಭವದಿಂದ ದೂಡಿ
ದೀಪವು ಹೊಳೆದೊಡೆ
ಮೋಹವು ಮರೆತು ಹೋಗಬೇಕು

ತಾಮಸ ಗುಣಗಳನು
ಎದೆ ಬಾಣಲೆಯಲಿ ಕಾಯಿಸಿ
ಪ್ರಾಂಜಲ ಬೀಜಗಳನ್ನು
ಈ ನೆಲದಲ್ಲಿ ಉತ್ತಿ ಬಿತ್ತಬೇಕು

ಸಾಗರದಷ್ಟು ಪ್ರೀತಿ
ಮನದಾಳದಲ್ಲಿ ಹೊತ್ತು
ಮೋಕ್ಷದ ಪಥದಲಿ
ಇಹದ ಹಂಗುತೊರೆದು ನಾಕಸೇರಬೇಕು.

-ಮಹಾದೇವ ಎಸ್.ಪಾಟೀಲ
ರಾಯಚೂರು.
—–