ಅನುದಿನ ಕವನ-೧೦೪೦, ಕವಿ: ಕಿರಣ್ ಗಿರ್ಗಿ, ,ಚಾಮರಾಜನಗರ, ಕವನದ ಶೀರ್ಷಿಕೆ: ಆಟ

ಆಟ

ಏನಾದರಾಗಲಿ
ಇದ್ದು ಬಿಡಬೇಕು ನಾ
ಮಗುವಿನಂತೆ,
ಆಡಿಕೊಂಡು!

ಮತ್ತೊಬ್ಬನ ಸೋಲಿಸಿ
ಗೆದ್ದು ಬೀಗುವ ಓಟ
ಬೇಕಿಲ್ಲ ನನಗೆ, ಎಂದೂ

ಬೇಕು ಆಟ –
ಆಡುವುದಕ್ಕಾಗಿ
ಮಕ್ಕಳಂತೆ, ಕೂಡಿ

ಆಡಲೇ ಬೇಕು ಆಟ
ಘಳಿಗೆ ಘಳಿಗೆಗಳ
ಪ್ರೀತಿಸುವುದಕ್ಕಾಗಿ

ಅವ್ವ ಕರೆದ
ದನಿಯ ಕೇಳಿ
ಓಡಿ ಬಂದು
ಮಡಿಲ ಸೇರಿ
ತಿಂದು ಉಂಡು
ಮುತ್ತ ಕೊಟ್ಟು
ಮತ್ತೋಡಬೇಕು, ಆಟಕೆ
ಮತ್ತಾಡಬೇಕು, ಆನಂದಕೆ

ಊರ ಕೇರಿಯಲ್ಲಾಗಲಿ
ಹೇಲಿನ ಮಾಳದಲ್ಲಾಗಲಿ
ನಿಲ್ಲಬಾರದು, ಆಟ

ಕುಪ್ಪಳಿಸಬೇಕು ಕುಣಿದು
ಮಣ್ಣ ಧೂಳಲಿ ಬಿದ್ದು
ಸುಸ್ತಾದರೂ ಪೆಟ್ಟಾದರೂ
ಆಟ ಸಾಗಬೇಕು, ನಲಿದು!

ಏನಾದರೂ ಆಗಲಿ
ಇದ್ದು ಬಿಡಬೇಕು ನಾ
ಮಗುವಿನಂತೆ,
ಆಡಿಕೊಂಡು!

ಏನೇ ಆದರೂ ಆಗಲಿ
ಇದ್ದು ಬಿಡಬೇಕು ನಾ
ಮಗುವಿನಂತೆ,
ಆಡಿಕೊಂಡು!
ಹಾಡಿಕೊಂಡು!!

-ಕಿರಣ್ ಗಿರ್ಗಿ, ಚಾಮರಾಜನಗರ