ಅನುದಿನ ಕವನ-೧೦೪೨, ಕವಿ: ಡಾ.ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಕವಿ ಸತ್ತ ದಿನ!

ಕವಿ ಸತ್ತ ದಿನ!

ಕವಿ ಸತ್ತ ದಿನ;
ಅವನ ಅಮಾಯಕ ಪತ್ನಿ
ತನಗಿದ್ದ ಗಂಟು ಜಡೆಗೇ ತುರುಬುಗಟ್ಟಿ
ಇಟ್ಟು ನಾಗರಬಿಲ್ಲೆ
ಮುಡಿದು ಮಲ್ಲಿಗೆ ಮಾಲೆ
ದೊಡ್ಡ ಕುಂಕುಮ ಹಣೆಗೆ ಇಳಿದು
ಬೈತಲೆಯ ಠೀಕು ಟಾಕು..
ಮುಗುಳ್ನಗೆಯ ಧರಿಸಿದ್ದು –
ಸುದ್ದಿ!

ಅರೆ! ಇದೇನು ಸದ್ದು!?
ಇದ್ಯಾವ ಹುಯಿಲು ನಿಡುಸುಯ್ಲು
ಸತ್ತದ್ದು ನಿಮ್ಮ ಕವಿ ಮಾತ್ರ
ನನ್ನ ಗಂಡ ಅಜರಾಮರ ಎಂದೂ ಸಾಯದ
ಭಂಡ ಬಂಡೆ ಕಲ್ಲಿನಂತೆ ದೃಢ
ನನ್ನ ಕೊರಳ ಪದಕಕ್ಕೆ
ಮೂರನೆಯ ಅಂತಸ್ಥಿನ ಫ್ಲಾಟಿಗೆ
ಮನೆ ತುಂಬಿದ ಫರ್ನೀಚರ್ರು ಕಾಟಿಗೆ
ಕೊಂಡ ಹೊಸಾ ಮಾಡೆಲ್ ಕಾರಿಗೆ
ಇಎಂಐ ಕಟ್ಟುವ ಧೀರ
ಬೇಡ ಈ ಅಳಲು ನಿಮಗಾರಿಗೂ
ಅವ ನನಗೆ ಮಾತ್ರ
ಸ್ವಂತ!

ಇರಬಹುದು ಇರಬಹುದು
ಬರುವುದು ಬಪ್ಪಲಿ
ಜನ ಒಪ್ಪಲಿ ತಪ್ಪಲಿ ಎಂದೇ
ಅವ ಒರೆದದ್ದು ಬರೆದದ್ದು ಕೊರೆದದ್ದು
ಕವಿತೆ: ಭವದ ಬದುಕ ಬೆಟ್ಟವ
ಅಚಲವ ಹಾರಿ ಹಕ್ಕಿ ತಲೆಬಾಗಿಲು
ಹಿಮಾಲಯದ ಮಧ್ಯೆ ತುಯ್ದು
ತಟಪಟಿಸಿದ್ದೂ ರಾಧೆಯ ವಿರಹ ಬಾಧೆಗೆ
ಕೃಷ್ಣನ ಕೊಳಲ ಕನವರಿಕೆಗೆ
ಇನ್ನೊಂದು ದಡ ಹಾಯದ ಆ ಅಲೆಗೆ
ಕಂಡದ್ದು ಹೆಣ್ಣ ಮೊಲೆ
ಹವಳದ ತುಟಿ ಇವಳ ಕಟಿ
ಭಾವದಲೆಯ ಮೇಲೆ ತೇಲಿ ಶೃಂಗಾರ ಕಲೆ

‘ಕಳಬೇಡ ಕೊಲಬೇಡ ಹುಸಿಯ
ನುಡಿಯಲು ಬೇಡ…
ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ’
ಎಂಬ ಬಸವಣ್ಣನ ಮಾತು ಅಪಥ್ಯ
ಸತ್ಯ ಎಂದೂ ವಿರೂಪ ಕುರೂಪ
ಸುಳ್ಳೇ ಸುಂದರ ಎಂದೇ ಕವಿಗೆ ನಟನೆ
ನಾಟಕೀಯತೆ ರಮಣೀಯತೆ ರಮ್ಯತೆ
ತಂದು ಕೊಟ್ಟದ್ದು ದೊಡ್ಡ ಭಕ್ತ ಗಣ
ಸಖೀ ಗಡಣ ಶಿಷ್ಯರಿಗೆ ಈ ಗುರುವೇ
ಮಹಾನ್ ಆತ್ಮ
ಮಹಾತ್ಮ

ಈಗೀಗ ಅವ ಮಾತನಾಡುವಾಗಲೂ
ಅವನದೇ ಉಲ್ಲೇಖ ಸುಖ ಸಲ್ಲೇಖ
ಅವನದೇ ಅಳಲು ಅತ್ತ ಕೊರಳು
ಮಾತು ಬರಿಯೇ ಮರುಳು ಆದರೂ –
ತನ್ನಾಶ್ರಯದ ರತಿಯ
ಸುಖವ ಉಂಬದ ಶೂರ
ಕೊಟ್ಟ ಕುದುರೆಯನೇರಲರಿಯದ ಧೀರನಿಗೂ – ಅಳುಕು:
ಅವನೇ ಹಳಿದಿದ್ದ ಹೀಯಾಳಿಸಿ ಜರಿದಿದ್ದ
ಜನರು ಎದ್ದು ಬಂದಾರು
ಬಂದು ಎದೆಗೆ ಒದ್ದಾರು!

ತನ್ನ  ಕನಸಲ್ಲೇ ಕನಲುವ ಈ ಕವಿಗೆ
ಕೇಳುವುದಿಲ್ಲ:
ಅವಳ ಕಳವಳ ಬಿಕ್ಕು
ಬಡವನೊಡಲ ಬಡಬಾಗ್ನಿ ಸುಯ್ಲು
ಕಾಣುವುದಿಲ್ಲ:
ಬೆಲೆ ಸಿಗದೇ ಬಾಡಿಹೋದ ಕೊಯ್ಲು
ಹಗಲ ಹೆದರಿಸುವ ರಾತ್ರಿ ಆವರಿಸುವ
ಅತ್ಯಾಚಾರಿ ನೆರಳು!

ಚಂದ್ರ ತಾರೆ ನೀಹಾರಿಕೆಗಳು ಇಲ್ಲವೇ
ಕತ್ತಲಲ್ಲಿ! ಸತ್ತವರಿಗೇಕೆ ಸ್ಮರಣೆ!?
ಯಾರೇನು ಮರಣಿಸರೇ
ಗೂಟ ಬಡಿದಂತೆ ಇಹವ ಇಂಬರೇ!?
ಹೆರವರ ಕಷ್ಟವ ಪರವ ಕೊಂಬರೇ!?
ಎಂದೇ ಕವಿ ಈಗ ಬರೆಯುವುದಿಲ್ಲ
ಸೋರಿ ಹೋಗದಂತೆ ಗರ್ವ ರಸವ
ಮಸ್ತಿಷ್ಕದ ಮಡಕೆಯಲ್ಲಿ ತುಂಬಿ ತಂದವ
ಈ ಕುಂಭ ಸಂಭವ ಬರೆದೊರೆಯಲು
ಕಾಲ ಕಾಯುವುದಿಲ್ಲ

ಹಾಗಾಗಿ
ಕವಿ ಸತ್ತ ದಿನ
ಪತ್ರಿಕೆಯ ಮೂರನೆಯ ಪುಟದಲ್ಲೂ
ಸುದ್ದಿ ಇಲ್ಲ!


-ಡಾ.ಆನಂದ್ ಋಗ್ವೇದಿ, ದಾವಣಗೆರೆ
—–