ಕವಿಯೀಗ ಕಾಣೆಯಾಗಿದ್ದಾನೆ!
ರವಿ ಕಾಣದ್ದನ್ನು ಕಂಡು
ಬೆರಳ ತುದಿಯಲ್ಲೇ
ಭಾವಗಳ ಬಸಿದು
ಅಕ್ಷರಗಳಲ್ಲಿ ಅಭಿವ್ಯಕ್ತಿಸುವ
ಕವಿ ಮಹಾಶಯನೀಗ ಕಣ್ಮರೆ
ಜನರ ಬೇಗುದಿಗಳಿಗೆ ಮಡಿಲಾಗಿ
ಒಡಲ ಕಿಚ್ಚುಗಳಿಗೆ ಸಿಡಿಲಾಗಿ
ಕಡಲಂತೆ ಅಬ್ಬರಿಸಬೇಕಿದ್ದ
ಕವಿಯೀಗ ಎಲ್ಲಿ ಮಾಯವಾದನೊ?
ಬಹುಶಃ…..
ಕವಿಗೋಷ್ಠಿಯ ಲಿಸ್ಟಿನಲ್ಲಿ
ತನ್ನ ಹೆಸರು ಹುಡುಕುತ್ತಾ,
ವೇದಿಕೆಯ ಮೇಲೆ ಭಾವಪರವಶನಾಗಿ
ಕವಿತೆ ಓದುತ್ತಾ,
ಹಾರ-ತುರಾಯಿಗಳ ಭಾರದಲ್ಲಿ
ಕರಗಿ ಹೋಗುತ್ತಾ,
ಪ್ರಶಸ್ತಿಗಳ ಮೋಹಕ್ಕೆ ಸಿಲುಕಿ
ಒದ್ದಾಡಿ ಗುದ್ದಾಡುತ್ತಾ
ಕಳೆದು ಹೋಗಿರಬೇಕು
ಅಲ್ಲೆಲ್ಲೋ ಶ್ರದ್ಧಾಂಜಲಿ ಸಭೆ ನಡೆದಿದೆ…..
ಕವಿತೆ ಹೇಳಿತು
ಮೌನ ಪ್ರಾರಂಭ!
-ನಾಗೇಶ್ ಜೆ. ನಾಯಕ, ಸವದತ್ತಿ
*****