ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ – ಜಿಪಂ ಯೋಜನಾ ನಿರ್ದೇಶಕ ಪಿ.ಪ್ರಮೋದ್

ಬಳ್ಳಾರಿ,ನ.18: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪಿ.ಪ್ರಮೋದ್ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವಿಶೇಷ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವಿಶೇಷ ನೋಂದಣಿ ಅಭಿಯಾನ ನಡೆಯುತ್ತಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಹೊಸದಾಗಿ ನೋಂದಣಿ ಹಾಗೂ ಈಗಾಗಲೇ ನೋಂದಾಯಿಸಿರುವವರು ಹೆಸರು, ವಿಳಾಸ ತಿದ್ದುಪಡಿ ಸಂಬಂಧಿಸಿದಂತೆ ನಿಮ್ಮ ಹತ್ತಿರದ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಮನೆಯ ಸುತ್ತ ಮುತ್ತಲಿನವರಿಗೂ ಮತ್ತು ನಿಮ್ಮ ಊರಿನವರಿಗೂ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಚುನಾವಣಾ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವಿಶೇಷ ನೋಂದಣಿ ಅಭಿಯಾನದ ಜಾಗೃತಿ ಜಾಥಾವು ನಗರದ ಸರಳಾದೇವಿ ಕಾಲೇಜಿನಿಂದ ಆರಂಭಗೊಂಡು ಸಂಗಂ ವೃತ್ತದ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಕಾಲೇಜಿಗೆ ತಲುಪಿತು.


ಜಾಥಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಕೆ.ಮಂಜುನಾಥ್ ರೆಡ್ಡಿ ಅವರು ಮಾತನಾಡಿ ಮತದಾನ ಮಹತ್ವ, ವಿಶೇಷ ನೊಂದಣಿ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಲಿ, ಇತಿಹಾಸ ವಿಭಾಗದ ಡಾ. ಸೋಮನಾಥ ಸಿ.ಎಚ್, ರಾಮಾಂಜನೇಯ,ಡಾ. ಶಶಿಕಾಂತ್, ಅರ್ಥಶಾಸ್ತ್ರ ವಿಭಾಗದ ಡಾ.ಹುಚ್ಚುಸಾಬ್, ಅಮರೇಗೌಡ, ವಾಣಿಜ್ಯ ವಿಭಾಗ ಗುರುಬಸಪ್ಪ , ಕನ್ನಡ ವಿಭಾಗದ ಡಾ.ದಸ್ತಗಿರಿಸಾಬ್ ದಿನ್ನಿ, ವಿಜ್ಞಾನ ವಿಭಾಗದ ಡಾ.ಮಂಜುನಾಥ್, ದೈಹಿಕ ಶಿಕ್ಷಣದ ನಿರ್ದೇಶಕ ಪಂಪನಗೌಡ, ಕಾಲೇಜಿನ ವಿವಿಧ ವಿಭಾಗಗಳ ಸಹಾಯಕ ಪ್ರಾದ್ಯಪಕರು, ಉಪನ್ಯಾಸಕರು, ಇ ಎಲ್ ಸಿ ಸಂಚಾಲಕ ಬಸಪ್ಪ ಕೆ ಮತ್ತಿತರರು ಪಾಲ್ಗೊಂಡಿದ್ದರು.
—–