ನೀನಿರುವ ಕವಿತೆ
ನೀನಿರುವ ಕವಿತೆಗೆ ಒಲಿಯಲೆಂದು ಹೋದೆ;
ಹೆಣ್ಣೊಲವ ಸಿರಿಯನ್ನು ಗಳಿಸಿ ಬಾ ಎಂದಿತು!
ಒಲವಿನ ಹೆಣ್ಮನವ ಬಯಸುತಲಿ ಅಲೆದೆ;
ಹೂವಿನೆಲ್ಲ ಚೆಲುವನ್ನು ಹೊದ್ದು ಬಾ ಎಂದಳು!
ಚೆಲುವಿನ ಹೂವುಗಳ ಹಂಬಲಿಸಿ ಹೊರಟೆ;
ಚಿಟ್ಟೆಯ ಬಣ್ಣಗಳ ತೊಟ್ಟು ಬಾ ಎಂದವು!
ರಂಗುರಂಗಿನ ಚಿಟ್ಟೆಗಳಿಗೆ ಕಾತರಿಸಿ ಹೋದೆ;
ಬೆಳಕಿನ ಸೂರ್ಯನ ಕುಡಿದು ಬಾ ಎಂದವು!
ನೇಸರನಿಗೆ ದಿಟ್ಟಿಯ ನೆಟ್ಟು ಬೆಳಕ ಧೇನಿಸಿದೆ;
ಮಧುರ ಚಂದಿರನನ್ನು ಬೇಡಿಕೊ ಎಂದಿತು!
ಇರುಳಿನ ತಂಪು ಶಶಿಯ ಬಿಡದೆ ಕಾಡಿದೆ;
ಧರಣಿಯ ತಾಳ್ಮೆಯ ಧರಿಸು ಹೋಗೆಂದಿತು!
ಇಳೆಯ ಮೇಲುರುಳಿ ತಬ್ಬಿ ಕಣ್ಣೀರುಗರೆದೆ;
ವಿಸ್ಮಯ ಪ್ರಕೃತಿಯಲ್ಲಿ ಮುಳುಗೇಳು ಎಂದಿತು!
ಉನ್ಮತ್ತ ನಿಸರ್ಗದಿ ಏಕಚಿತ್ತದಲ್ಲಿ ಲೀನವಾದೆ;
ಕವಿತೆಯು ತನುಮನದಿ ಉಕ್ಕಿ ಝೇಂಕರಿಸಿತು!
ಒಲವಿನೆದೆಯು ಕಾವ್ಯಕನ್ನಿಕೆ ಮನೆಯಾಯಿತು!
ಕವಿತೆಯಲ್ಲಿ ನೀನಿದ್ದು ಕೈಹಿಡಿದು ಬಂದಾಯಿತು!
ಜಗದ ಜನಧನಿಯಾಗಿ ಕೀರ್ತಿ ಮಾರ್ಧನಿಸಿತು!
-ಟಿ.ಪಿ.ಉಮೇಶ್ ಚಿತ್ರದುರ್ಗ
—–