ಕಾಂತರಾಜ್ ಆಯೋಗದ ವರದಿ ಅಂಗೀಕರಿಸದಿದ್ದರೆ ಹೋರಾಟ ಅನಿವಾರ್ಯ -ಕೆ.ಇ.ಚಿದಾನಂದಪ್ಪ ಎಚ್ಚರ

ಬಳ್ಳಾರಿ, ನ.20: ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ, ಜಾರಿಗೆ ತರದಿದ್ದರೆ
ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಎಚ್ಚರಿಸಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಕುರಿತು ಈ ಹಿಂದೆ ಕಾಂಗ್ರೆಸ್ ಸರ್ಕಾರ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ಕಾಂತರಾಜ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ರಾಜ್ಯ ಸರ್ಕಾರ ನೀಡಿದ ಸಂಪನ್ಮೂಲ ಬಳಸಿಕೊಂಡು ಹಲವು ತಿಂಗಳುಗಳ ಕಾಲ ಶ್ರಮಿಸಿ ರಾಜ್ಯಾದಾದ್ಯಂತ ಸಮೀಕ್ಷೆಯನ್ನು ನಡೆಸಿ, ವರದಿ ಸಿದ್ಧಪಡಿಸಿದೆ. ಕಾರಣಾಂತರಗಳಿಂದ ವರದಿಯನ್ನು ಸರ್ಕಾರಗಳು ಸ್ವೀಕರಿಸಲಿಲ್ಲ. ಈಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ, ಜಾರಿಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಈ ತಿಂಗಳ ಅಂತ್ಯದಲ್ಲಿ ವರದಿ ಸ್ವೀಕರಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ, ಶೀಘ್ರ ವರದಿ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಹೇಳಿದ್ದಾರೆ. ಇವರಿಬ್ಬರೂ ಕೂಡಾ ಮಾತು ತಪ್ಪುವುದಿಲ್ಲ ಎಂಬ ವಿಶ್ವಾಸ ಒಕ್ಕೂಟಕ್ಕಿದೆ. ಆಕಸ್ಮಾತ್ ಯಾರೇ ಮಾತು ತಪ್ಪಿದರೂ ಅವರ ವಿರುದ್ಧ ಹೋರಾಡುತ್ತೇವೆ ಎಂದರು.
ಕಾಂತರಾಜ್ ಆಯೋಗದ ವರದಿಯ ಜಾರಿಗಾಗಿ ಹೋರಾಟ ರೂಪಿಸಲು ಎಲ್ಲಾ ಶೋಷಿತ ಸಮುದಾಯಗಳ ಮುಖಂಡರು ತೀರ್ಮಾನಿಸಿದ್ದೇವೆ, ಸರ್ಕಾರದ ನಡೆ ನೋಡಿಕೊಂಡು ಹೋರಾಟಕ್ಕಿಳಿಯುತ್ತೇವೆ ಎಂದು ಚಿದಾನಂದಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿದ್ದ ದಲಿತ ಮುಖಂಡ ಎ.ಮಾನಯ್ಯ ಮಾತನಾಡಿ, ಕಾಂತರಾಜ್ ಅವರು ಸಿದ್ಧಪಡಿಸಿರುವ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಗಣತಿ ವರದಿಯನ್ನು ತಕ್ಷಣವೇ ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಾಂತರಾಜ್ ಆಯೋಗದ ವರದಿಯ ಬಗ್ಗೆ ಅನಗತ್ಯ ಆತಂಕ, ಗೊಂದಲ, ಸುಳ್ಳು ಮಾಹಿತಿ ಹರಡುವ ಪ್ರಯತ್ನಗಳು ನಡೆದಿದ್ದು, ಇಂತಹ ಪ್ರಯತ್ನಗಳ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಾಗಲಿ, ಜನಪ್ರತಿನಿಧಿಗಳಾಗಲಿ, ಸಾಮಾನ್ಯ ಜನರಾಗಲಿ ಗಮನ ನೀಡಬಾರದು. ಏಕೆಂದರೆ ಸೋರಿಕೆ ಎಂಬ ಪದ ಬಳಸಿ ಸ್ವರಚಿತ ಅಂಕಿ ಸಂಖ್ಯೆಗಳ ಮೂಲಕ,ವರದಿಯ ಮಹತ್ವ ಕಡಿಮೆ ಮಾಡುವ ಪ್ರಯತ್ನ ಕೆಲವೇ ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.
ಕಾಂತರಾಜ್ ಆಯೋಗದ ವರದಿಯ ಅಂಗೀಕಾರ, ಬಿಡುಗಡೆ ಹಾಗೂ ಜಾರಿಗೆ ಒತ್ತಾಯಿಸುತ್ತಿರುವ ನಾವು ಯಾವುದೇ ಜಾತಿ, ಧರ್ಮದ ಜನರ ವೀರೋಧಿಗಳಲ್ಲ. ಯಾವುದೇ ಜಾತಿ, ಧರ್ಮದ ಜನರಿಗೆ ಸಂವಿಧಾನ ದತ್ತವಾಗಿ ಹಾಗೂ ಸಹಜವಾಗಿಯೆ ಸಿಕ್ಕಿರುವ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯ, ಸವಲತ್ತು, ಅವಕಾಶಗಳನ್ನು ಕಸಿಯಬೇಕೆಂಬ ಉದ್ಧೇಶ ನಮಗೆ ಇಲ್ಲ ಎಂದು ಹೇಳಿದ ಅವರು, ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಒದಗಿಸಬೇಕು ಎಂದರು.
ಕೆಪಿಆರ್ ಎಸ್ ಜಿಲ್ಲಾಧ್ಯಕ್ಷ ಶಿವಶಂಕರ್ ಮಾತನಾಡಿ, ವರದಿ ಬಹಿರಂಗವಾದರೆ ಕೆಲವು ಸಮುದಾಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಕುತ್ತು ಬರಲಿದೆ ಎಂಬ ಚರ್ಚೆ ಹುಟ್ಟು ಹಾಕಲಾಗಿದ್ದು, ಇದು ಸುಳ್ಳು. ಮೊದಲು ವರದಿ ಬಹಿರಂಗ ಆಗಲಿ. ತದನಂತರ ಎಲ್ಲ ಸಮುದಾಯಗಳಿಗೆ ನ್ಯಾಯವಾದುದನ್ನೇ ಸರ್ಕಾರ ಮಾಡಲಿ ಎಂದರು.
ಯಾವುದೇ ಸಮೀಕ್ಷೆ ಅಥವಾ ಜಾತಿ, ಜನಸಂಖ್ಯೆ ಗಣತಿಯ ವರದಿಯನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ಸ್ವೀಕರಿಸಿ, ತದನಂತರ ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡುವಂತೆ ಈ ವರದಿಯನ್ನೂ ಕೂಡ ಸ್ವೀಕರಿಸಿ ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಬೇಕು. ಆ ಸಮಯದಲ್ಲಿ ಯಾವುದೇ ವ್ಯಕ್ತಿಗಳು, ಸಮುದಾಯಗಳು ಏನಾದರೂ ತಮಗೆ ವರದಿಯಲ್ಲಿ ಲೋಪ ಎನಿಸಿದರೆ ಅವರಿಂದ ಅಹವಾಲು ಸ್ವೀಕರಿಸಿ ಸೂಕ್ತ ಪರಿಶೀಲನೆ ಮತ್ತು ತಿದ್ದುಪಡಿ ಇದ್ದರೆ ನಂತರ ವರದಿಯನ್ನು ಸರ್ಕಾರ ಅಂಗೀಕಾರ ಮಾಡಬೇಕು ಎಂದು ಹೇಳಿದ ಶಿವಶಂಕರ್, ಹಾಗೊಂದು ವೇಳೆ ಕಾಂತರಾಜ್ ಆಯೋಗದ ವರದಿಯು ಶಿಫಾರಸ್ಸುಗಳನ್ನೂ ಒಳಗೊಂಡಿದ್ದರೆ, ಸದರಿ ಶಿಫಾರಸ್ಸುಗಳನ್ನು ಜಾರಿ ಮಾಡಲು ಕಾನೂನು ಚೌಕಟ್ಟಿನಲ್ಲಿರುವ ಅವಕಾಶಗಳು ಹಾಗೂ ವರದಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನೀಲನಕ್ಷೆಯೊಂದನ್ನು ತಯಾರಿಸಲು ಹಿರಿಯ, ಅನುಭವಿ  ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉಪಸಮಿತಿ ರಚಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕುರುಬರ ಸಂಘದ ನೂತನ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕೊಡಿಸಲು ಶ್ರಮಿಸಿದ ಬಸವಣ್ಣ, ಸ್ವಾತಂತ್ರ್ಯ ಪೂರ್ವದಲ್ಲಿ ಮಿಲ್ಲರ್ ಕಮಿಷನ್ ರಚನೆ ಮಾಡಿ ಸರ್ವರಿಗೂ ನ್ಯಾಯ ಒದಗಿಸಿದ ರಾಜರ್ಷಿ  ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು, ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಇರುವ ಯಾರೂ ಕೂಡ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಲು ವಿರೋಧಿಸಲಾರರು ಎಂಬುದು ನಮ್ಮ ನಂಬಿಕೆ ಎಂದು ಹೇಳಿದರು.
ಬಿಜೆಪಿ ಮುಖಂಡ ಕೆ.ಎ. ರಾಮಲಿಂಗಪ್ಪ,   ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಆದರೆ ಹಾಲಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಯೇ ಇಲ್ಲ. ಮೊದಲು ವರದಿ ಸಲ್ಲಿಕೆ ಆಗಲಿ ಎಂದರು.
ಸರ್ಕಾರ ತಕ್ಷಣವೇ ವರದಿ ಸ್ವೀಕರಿಸಿ, ಅಂಗೀಕಾರ ಮಾಡಿ, ಸಾರ್ವಜನಿಕಗೊಳಿಸದಿದ್ದಲ್ಲಿ ನಾವು ನ್ಯಾಯಯುತ ಮಾರ್ಗದಲ್ಲಿ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ಶೋಷಿತ ಸಮುದಾಯಗಳು ಹಾಗೂ ಜನಪರ ಸಂಘಟನೆಗಳ ಮುಖಂಡರಾದ ಎಲ್.ಮಾರೆಣ್ಣ, ಬಿ.ಕೆ.ಕೆರೆಕೋಡಪ್ಪ, ಬಿ.ಎಂ.ರಫೀಕ್, ಅನಂತಕುಮಾರ್, ರಾಮಕೃಷ್ಣ, ಬಿ.ಕೆ.ಗಾದಿಲಿಂಗಪ್ಪ, ಹೊನ್ನೂರಪ್ಪ, ಸಂಗನಕಲ್ಲು ವಿಜಯಕುಮಾರ್, ಶ್ರೀನಿವಾಸಮೂರ್ತಿ, ಕೊಳಗಲ್ ಯರ್ರಿಸ್ವಾಮಿ ಉಪ್ಪಾರ, ಆನಂದ್, ಪಾಂಡುರಂಗ, ಯರ್ರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
*****