ಬಳ್ಳಾರಿ, ನ.23: ನಗರದ ಹಿರಿಯ ಸಾಹಿತಿ
ಟಿ.ಕೆ. ಗಂಗಾಧರ ಪತ್ತಾರ ಅವರ ,
”ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು’ ಕೃತಿ ನ. 25ರಂದು ಶನಿವಾರ ಸಂಜೆ 6 ಗಂಟೆಗೆ ನಗರದ ‘ರಾಘವ ಕಲಾಮಂದಿರ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುನರುತ್ಥಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಶ್ರೀನಾಥ ಜೋಷಿ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಡಿನ ಹೆಸರನ್ನು ಬೆಳಗಿಸಿದ ಬಳ್ಳಾರಿಯ ಮಹಾನ್ ಚೇತನಗಳ ವ್ಯಕ್ತಿ ಚಿತ್ರಣ ಲೇಖನಗಳು ಈ ಕೃತಿಯಲ್ಲಿವೆ ಎಂದು ಹೇಳಿದರು.
“ಕೋವಿಡ್-2019”ರ ಕಾಲಾವಧಿಯಲ್ಲಿ ಕವಿ, ಲೇಖಕ, ಗಾಯಕ, ರಂಗಭೂಮಿ ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರನ್ನು ಕುರಿತು ಪ್ರತಿದಿನ ವ್ಯಕ್ತಿಚಿತ್ರಣ ಲೇಖನಗಳನ್ನು ಫೇಸ್ ಬುಕ್ ನಲ್ಲಿ ಬರೆದ ಹೆಗ್ಗಳಿಕೆ ಗಂಗಾಧರ ಪತ್ತಾರ ಅವರದಾಗಿದೆ ಎಂದರು.
ಇನ್ನೂರರ ಗಡಿ ದಾಟಿದ ಆ ಲೇಖನಗಳನ್ನು ನಾನೊಮ್ಮೆ ಅವರ ಮನೆಗೆ ಹೋದಾಗ ಗಮನಿಸಿ ಆಕರ್ಷಿತನಾದೆ. ಆ ಪೈಕಿ ಬಳ್ಳಾರಿಯಲ್ಲಿ ಆಗಿ ಹೋದ ಶ್ರೇಷ್ಠರ ವ್ಯಕ್ತಿಚಿತ್ರಣಗಳನ್ನು ಆರಿಸಿಕೊಂಡು ಪ್ರಕಟಿಸಿ-ಲೋಕಾರ್ಪಣೆ ಮಾಡುತ್ತಿರುವ ಕೃತಿಯೇ-ಈ “ಬಿಸಿಲುಸಿರು ಸುರಭಿಸಿದ ಪ್ರತಿಭಾಗ್ನಿ ಕುಸುಮಗಳು” ಎಂದು ವಿವರಿಸಿದರು.
ಪತ್ತಾರ ಅವರು ಶೀರ್ಷಿಕೆ ಬಹಳ ದೊಡ್ಡದಾಯ್ತು. ಸಂಕ್ಷಿಪ್ತವಾಗಿಸೋಣವೆಂದರು, ಅದೇಕೋ ನನ್ನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿಬಿಟ್ಟಿತ್ತು ಹೀಗಾಗಿ ಈ ಶೀರ್ಷಿಕೆಯಲ್ಲಿ ಕೇಂದ್ರ ಪುಸ್ತಕ ಪ್ರಕಟಿಸಿದೆ ಎಂದು ತಿಳಿಸಿದರು.
ಪತ್ತಾರ ಅವರು 8ಭಾಗಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ವ್ಯಕ್ತಿಚಿತ್ರಣಗಳನ್ನು ಸಂಕಲಿಸಿಕೊಟ್ಟಿದ್ದಾರೆ. ಪೀಠಿಕಾ ಭಾಗದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರಾಚೀನ-ಅರ್ವಾಚೀನ-ಆಧುನಿಕ-ಸಮಗ್ರ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಬಳ್ಳಾರಿ ವಿಕಸನದ ಕಾರಣಪುರುಷರಾದ ಯುರೋಪಿಯನ್ನರು, ಸ್ವಾತಂತ್ರ್ಯಯೋಧರು, ದಾರ್ಶನಿಕರು, ಕಲಾವಿದರು ಹೀಗೆ ಎಂಟು ಭಾಗಗಳಲ್ಲಿ ವಿವಿಧ-ವಿಶಿಷ್ಟ ಚಿತ್ರಣಗಳನ್ನು ಮನೋಜ್ಞ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದು ಜೋಷಿ ಹೇಳಿದರು.
ಭಾರತದಲ್ಲೇ ಪ್ರಪ್ರಥಮ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ಕಾರ್ಡಿಯಾಲಜಿ ಸರ್ಜನ್-ಡಾ.ಎನ್.ಗೋಪಿನಾಥ್ ಬಳ್ಳಾರಿಯವರೆಂಬುದು ಈ ಕೃತಿಯಿಂದ ಗೊತ್ತಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಮೊಟ್ಟಮೊದಲ ಚುನಾವಣೆಯಲ್ಲಿ ಪ್ರತಿಷ್ಠಿತ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಗೆದ್ದು ಶಾಸಕಿಯಾದ ಶ್ರೀಮತಿ ಅಲ್ಲಂ ಸುಮಂಗಳಮ್ಮನವರು. “ತಮ್ಮ ಪಕ್ಷದವರನ್ನು ಸೋಲಿಸಿದ ಮಹಿಳೆ ಯಾರು ಎಂದು ನೋಡಲು ಪ್ರಧಾನಿ ನೆಹರೂ ಮುದ್ದಾಂ ಬಳ್ಳಾರಿಗೆ ಬಂದಿದ್ದ ವಿಶೇಷ ಲೇಖನಗಳೇ ಈ ಕೃತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಕೃತಿಕಾರ ಗಂಗಾಧರ ಪತ್ತಾರ ಅವರು ಮಾತನಾಡಿ
ತಮ್ಮ ಮೊದಲ ಕೃತಿ ‘ವೈದ್ಯ ಸೇವಾ ಜ್ಯೋತಿಗಳು’ ಕೃತಿಯನ್ನು ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ತಮ್ಮ ಸಂಸ್ಕೃತಿ ಪ್ರಕಾಶನದಿಂದ ಪ್ರಕಟಿಸಿದ್ದರು. ಒಂದೂವರೆ ದಶಕಗಳ ಬಳಿಕ ಮತ್ತೊಂದು ಕೃತಿ ಲೋಕಾರ್ಪಣೆ ಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ ಎಂದರು.
9ನೇತ್ತೆ ವಿದ್ಯಾರ್ಥಿಯಾಗಿದ್ದಾಗಲೇ ರಚಿಸಿದ ಮೊಟ್ಟಮೊದಲ ಕವನ “ಕರ್ಮವೀರ”ದಲ್ಲಿ ಅಚ್ಚಾಯ್ತು. ಸುಧಾದಲ್ಲಿ ಬಂದ ಸಣ್ಣಕತೆಯಾಧರಿಸಿ ಡಾ.ವಿಷ್ಣುವರ್ಧನ್ ಅವರು ನಟಿಸಿರುವ “ರುದ್ರನಾಗ”ಕನ್ನಡ ಚಲನ ಚಿತ್ರ ಬಿಡುಗಡೆಯಾಗಿದೆ ಎಂದರು.
ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು ವಿಮ್ಸ್ ವಿಶ್ರಾಂತ ಪ್ರಾಚಾರ್ಯ ಡಾ.ಟೇಕೂರ್ ರಾಮನಾಥ ಅವರು ವಹಿಸುವರು. ಸಂಶೋಧಕ, ಪ್ರಾಧ್ಯಾಪಕ ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಅವರು ಕೃತಿ ಪರಿಚಯಿಸುವರು.
ಮುಖ್ಯ ಅತಿಥಿಗಳಾಗಿ ವಾರ್ಡ್ಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಎಚ್ ರವಿಕುಮಾರ್, ವಿಮ್ಸ್ ವಿಶ್ರಾಂತ ಪ್ರಾಚಾರ್ಯ ಡಾ. ವಿದ್ಯಾಧರ ಕಿನ್ನಾಳ್, ಸಾಹಿತಿ, ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ, ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಮುಖ್ಯಸ್ಥ ಭೀಮಸೇನ ಬಡಿಗೇರ ಅವರು ಉಪಸ್ಥಿತರಿರುವರು.
ಪ್ರಜ್ಞಾ ಪ್ರವಾಹ ಸಂಸ್ಥೆಯ ಅಖಿಲ ಭಾರತ ಸಹ ಸಂಯೋಜಕ ರಘುನಂದನ ಅವರು ಆಶಯ ನುಡಿಗಳನ್ನಾಡುವರು. ಉಪನ್ಯಾಸಕ, ಸಾಹಿತಿ ಎ ಎಂ ಪಿ ವೀರೇಶ್ ಸ್ವಾಮಿ ಅವರು ಕೃತಿಕಾರರನ್ನು ಪರಿಚಯಿಸಲಿದ್ದಾರೆ.
ಕೃತಿಕಾರ ಗಂಗಾಧರ ಪತ್ತಾರ, ಪ್ರಕಾಶಕ ಶ್ರೀನಾಥ್ ಜೋಷಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕಲಾವಿದ, ಪುನರುತ್ಥಾನ ಅಧ್ಯಯನ ಕೇಂದ್ರದ ಜೆ. ವೆಂಕೋಬಾಚಾರ್ ಇದ್ದರು.
—–