ಅನುದಿನ ಕವನ-೧೦೫೮, ಕವಿ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಮಿಥಿಲೆಯ ಮಾವಿನ ಮರ

ಮಿಥಿಲೆಯ ಮಾವಿನ ಮರ

ಮರ ನಿಂತಿದೆ ಸುಮ್ಮನೆ
ಮುಂಚಿನ ದಿನ ಸಿಡಿಲು ಬಡಿದಂತೆ
ಪಂಜರದಲ್ಲಿ ಗಾಳಿ ಹಿಡಿದು ಕಟ್ಟಿದಂತೆ
ಎಲೆ ಅಲುಗದೆ
ನೋವಿನೊಳಗದ್ದಿ ಮೂರ್ಛೆ ಬಿದ್ದಿದೆ;
ಮಿಥಿಲೆಯೂ ಹಾಗೆಯೇ
ಬಿಕ್ಕಿದರೂ ಬೆಂಕಿ ಬೀಳುತ್ತದೆ.

ಮಾತಾಡಿಸಿದೆ ಮರವನ್ನು
ಗದ್ಗದ ಗದ ಗದ ನುಡಿದು ನರಳಿತು

ಹೆಣ್ಣಾದಾಗ ನಾನು
ಅವಳಿನ್ನೂ ಕೂಸು
ಅಮ್ಮನ ಅಳು ಜೋಗುಳವೆಂದು
ಕಂಬನಿಯೇ ತೀರ್ಥವೆಂದರಿತ ಮುಗುದೆ
ನಿಧಾನಕ್ಕೆ
ಒಣಗಿತು ಬೇಸಿಗೆ
ತಂಪಿಗೊರಗಿ ನಲಿದಳು

ಅಲ್ಲಿಂದಾಚೆಗೆ ನಾನೂ ಅವಳು
ಅವಳೂ‌ ನಾನು
ಕೂಡಿ ಬೆಳೆದೆವು
ಕೂಗಳತೆ ದೂರದಲ್ಲಿ ಹರಿವ
ಗಂಗೆ
ತೊಡೆಯೇರಿದ ಶಿವನ ಭೃಂಗೆ
ಕರುಬುವಂತೆ.
ಕೋಗಿಲೆಯಿಲ್ಲದಾಗ ಹಾಡಾದಳು
ಗಿಳಿಗಳಿಲ್ಲದ ಕೊರಗು ನುಡಿದು ತೊಡೆದಳು

ಧಗೆ ಕುಣಿದಾಗ ಮಿಂಚು
ಶೀತ ಬಿರಿದಾಗ ಹಕ್ಕಿ ಕರೆದಳು
ದುಂಬಿಯ ಕೂಡೆ ಸಂಗವ ಮಾಡಿ
ಜೇನು ಕಟ್ಟಿದಳು
ಜಡೆ ಎಳೆದವನ ಕುರಿತು ದೂರು ಬರೆದು
ನೋಡದೆ ಹೋದವನ ನೆನೆದು ಕಂಬನಿ ಕರೆದಳು

ಮಿಥಿಲೆಯ ಹುಡುಗಿಗೆ ಲೋಕದೆಲ್ಲರಿಗಿಂಥ ಮಿಗಿಲು ದುಃಖ
ಮೀಸೆಗಳಿಲ್ಲಿ ಯಮನ ಪಾಶಗಳು
ಮನುಜರ ಮೈ ಕೊಳೆತು ಕೊಬ್ಬಿದೆ ನೆಲ
ಹೆಣ್ಣಿನ ಕಂಬನಿಗೆ ಗೋಧಿ ಸಾಸುವೆ
ಬೆಳೆಯುತ್ತದೆ ಎದೆಗೆ ಗೋಮವಾಗಿ

ಕಟ್ಟಿದ್ದ ಜೋಕಾಲಿ ಗುರುತು ನನ್ನ ಮುಂಗೈಯೊಳಗಿದೆ
ವಸಂತಕ್ಕೆ ಬಿಡಿಸಿದ ಎಲೆ ತೊಟ್ಟಿನ ಗುರುತು
ಮುಟ್ಟಿ ತೋರಿಸುವೆ
ನೋಡು;
ಹಾಡುಗಳನ್ನು
ಅದೆಷ್ಟೊ ಚಂದ್ರರು
ಇರುಳು ಕಳೆಸಿದ ಸೂರ್ಯರು
ಲೆಕ್ಕ ಬರೆದಿಟ್ಟಿದ್ದಾರೆ ತಾಳು

ಬಿಕ್ಕಿತು ಮರ ಮೆಲ್ಲನೆ
ಉದುರಿತು ಬೆವರು ಕೆಂಡದುಂಡೆಗಳಂತೆ
ಹಕ್ಕಿ ಹಾಡುತ್ತಿಲ್ಲ
ಜೇನು ಕೂರುತ್ತಿಲ್ಲ
ಗೊತ್ತಿನ ಗುರುತುಗಳಿಗೀಗ ಸೂತಕ ಪ್ರವಾಹ

ರಾತ್ರಿ ಪಾತಕಕ್ಕೆ‌ ಅಳುತ್ತಿದ್ದಾಳೆ ಗಂಗೆ ಕೇಳು
ಅಳುವ ಧೈರ್ಯ ಅವಳೊಬ್ಬಳಿಗೆ ಇಲ್ಲಿ

ಬಡವನ ಮಗಳು
ಮುದುಕನೊಡನೆ ಒಲ್ಲೆ ಎಂದಳು
ನೆನೆದು ಹಾಡಿ
ನನ್ನ ತಬ್ಬಿ
ಅತ್ತು ಕರೆದಳು
ಹೂವಿನಂಥ ಹುಡುಗನ ಕೂಡೆ
ದುಂಬಿಯಾದಳು
ಕಚಗುಳಿಯಲ್ಲಿ ನಿದ್ದೆ ಹೋದೆ..
ಅರ್ಧ ರಾತ್ರಿ
ಅವಳ ಕಡಿದರು

ಮಿಥಿಲೆಗೇಕೆ ಇಂಥ ದುಃಖ
ಹೇಗೆ ಬದುಕಲಿ?
ಅವಳ ರಕ್ತ ನನ್ನ ಸುತ್ತಿ
ಸುಟ್ಟು ಹಾಕಿದೆ
ಕೆಂಡದಂಥ ಹಣ್ಣು
ಅವಳ ನೆತ್ತರ ಹುಣ್ಣು
ಹೊತ್ತು ಮೆರೆದಿದ್ದೇನೆ
ಮೈಯ ತುಂಬ

ಬುದ್ಧನ ನಗು ಕಾಣಿ
ಇಲ್ಲಿ;
ಕೆಂಡಸಾಗರದಲ್ಲಿ ಬೆಂದ
ಕಬ್ಬಿಣದ ಸರಳು ಬೆಳಗಿದಂತೆ.

-ಡಾ.ವೆಂಕಟೇಶಯ್ಯ ನೆಲ್ಲುಕುಂಟೆ, ಬೆಂಗಳೂರು

—–