ಪ್ರವಾಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಅಗತ್ಯ : ಜಿಲ್ಲಾಧಿಕಾರಿ ನಕುಲ್

ಬಳ್ಳಾರಿ: ಪ್ರವಾಹ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತುಂಬ ಶ್ರಮಪಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ಅತ್ಯಂತ ಅವಶ್ಯಕತೆ ಇದೆ. ಪ್ರಥಮ ಚಿಕಿತ್ಸೆಯನ್ನು ಯಾವ ಸಂದರ್ಭದಲ್ಲಿ ನೀಡಬೇಕು ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಂಡು ಆಯಾ ಸಂದರ್ಭದಲ್ಲಿ ಪ್ರಥಮ ಚಕಿತ್ಸೆ ನೀಡುವ ಮೂಲಕ ಪ್ರಾಣಹಾನಿಯನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ವಿಪತ್ತು ನಿರ್ವಹಣಾ ಹಾಗೂ ಪ್ರಥಮ ಚಿಕಿತ್ಸೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯವರು ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಹಾಗೂ ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಹವಾದ ಸಂದರ್ಭದಲ್ಲಿ ಜಿಲ್ಲೆಯಿಂದ ಒಂದು ತಂಡವನ್ನು ಅಲ್ಲಿಗೆ ಕಳಿಸಲಾಗಿತ್ತು ಅವರು ತುಂಬ ಜಾಗೂರುಕತೆ ಮತ್ತು ಆಸಕ್ತಿಯಿಂದ ಅಲ್ಲಿಯ ಜನರ ರಕ್ಷಣೆ ಮಾಡಿದ್ದಾರೆ ಎಂದು ನಕುಲ್ ಅವರು  ಮೆಚ್ಚುಗೆ ವ್ಯಕ್ತಪಡಿಸಿದರು.
ರೆಡ್‍ಕ್ರಾಸ್ ತಂಡ ಇದೇ ರೀತಿಯ ಕಾರ್ಯಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಅನಕೂಲವಾಗಲು ಬಳ್ಳಾರಿ ಜಿಲ್ಲಾಡಳಿತವು ಡಿಎಂಎಫ್ ನಿಧಿಯಡಿಯಲ್ಲಿ ಜೀವ ರಕ್ಷಾ ಕವಚಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರವಾಹವಾಗುವ ಪ್ರದೇಶಗಳ ಸಮೀಕ್ಷೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ವಿಮ್ಸ್ ನಿರ್ದೇಶಕ ಡಾ. ದೇವಾನಂದ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ಸೇರಿದಂತೆ ಎಲ್ಲಾ ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.