ಹಸಿವು
ಏಯ್ ಓಡಬೇಡ್ವೋ ಬಾರೋ
ಇಲ್ಲಿ
ಒಂದಿಷ್ಟು ಹಾಲು ಕುಡಿದು ಹೋಗೊ
ಎಂದು ಅವಳು ಮೆಟ್ಟಿಲಿಳಿದು
ಗೇಟಿನ ತನಕ ಹಾಲಿನ
ಗ್ಲಾಸು ಹಿಡಿದುಕೊಂಡೇ ಬೆನ್ನಟ್ಟಿದ್ದಳು ಇಂದು
ಅವನು ಆಗಲೇ ಛಂಗನೆ ನೆಗೆದು
ಸ್ಕೂಟಿಯ ಮೇಲಿದ್ದ
ಪ್ರತಿ ದಿನ ಇವನು ಹಾಗೆಯೇ !
ತುತ್ತು ತುಟಿಗಿಟ್ಟರೆ ಮಾತ್ರ ಅನ್ನ ಒಳಗಿಳಿಯುತ್ತದೆ
ಈಗಿನ ಮಕ್ಕಳಿಗೆ ಹಸಿವಾಗುವುದಿಲ್ಲವೋ
ಹೇಗೆ ?
ಕುಕ್ಕುರುಗಾಲಿನಲ್ಲೇ ಕುಳಿತು ಊಟ ಮಾಡುತ್ತಿದ್ದ ನಮ್ಮಪ್ಪ
ತಟ್ಟೆಗೆ ಹಾಕಿದ ಅಷ್ಟೂ ರೊಟ್ಟಿಯನ್ನು
ತಿಳಿ ಸಾರಿನಲಿ ಅದ್ದಿ ಗಬ ಗಬನೇ ತಿಂದು
ರೊಟ್ಟಿಗಿಂತ ಜಾಸ್ತಿ ನೀರೇ ಕುಡಿದು
ಹೊಟ್ಟೆ ತುಂಬಿತೆಂದು ನಮ್ಮನ್ನೆಲ್ಲಾ
ನಂಬಿಸುವ ಹಾಗೆ ಹುಸಿ ಡರಕಿ ಹೊಡೆದು ಎದ್ದು ಎಲ್ಲಿಗೋ
ಹೊರಟು ಬಿಡುತ್ತಿದ್ದ
ಮಗನಿಗೆ
ಊಟವಿದೆ – ಹಸಿವಿಲ್ಲ
ಅಪ್ಪನಿಗೆ ತುಂಬ ಹಸಿವಿತ್ತು ಹೊಟ್ಟೆ ತುಂಬುವಷ್ಟು ಊಟವಿರಲಿಲ್ಲ
ಇವರಿಬ್ಬರ ನಡುವಿನ
ನಾನು ಮುಷ್ಟಿಯಗಲದ ಹೊಟ್ಟೆಯ
ಸಲುವಾಗಿ
ಎಷ್ಟೆಲ್ಲಾ ಮಣ್ಣು ಹೊತ್ತೆ ? ಏನು ಕತೆ !?
-ಲಕ್ಷ್ಮಣ ವಿ ಎ, ಬೆಂಗಳೂರು
****