ಅನುದಿನ ಕವನ-೧೦೬೦, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ, ಕವನದ ಶೀರ್ಷಿಕೆ: ಅಪ್ಪ ಮತ್ತು ಹಗ್ಗ

ಒಂದು ಮಾರು ಹಗ್ಗ
ಹೇಗೆಲ್ಲ ಬಳಸಬಹುದೆಂದು
ಅಪ್ಪನಿಗೆ ಮಾತ್ರ ಗೊತ್ತಿತ್ತು

ಅಪ್ಪನ ಕೈಯಲ್ಲಿ
ಸದಾ ಹಗ್ಗ ಇದ್ದಿರುತ್ತಿತ್ತು
ಅಪ್ಪ ಮತ್ತು ಹಗ್ಗ
ಎಂದಿಗೂ ನನ್ನ ಪಾಲಿಗೆ
ಬೇರೆ ಬೇರೆ ಪದಗಳಲ್ಲ

ಗದ್ದೆ ಕೆಲಸ ಮುಗಿಸಿ
ಮನೆಯಲ್ಲಿನ ದನಕ್ಕೆ
ಹುಲ್ಲು ತರಲು

ಮಕ್ಕಳು ತಪ್ಪು ಮಾಡಿದರೆ
ಅದನ್ನೇ ಜೋಡು ಮಾಡಿಕೊಂಡು
ಬರೆ ಏಳುವಂತೆ ಬಾರಿಸಲು

ಎತ್ತಿಗೆ ಹುಷಾರು ತಪ್ಪಿದಾಗ
ಕಾಲು ಕಟ್ಟಿ ಮಲಗಿಸಿ
ಇಲಾಜು ಮಾಡಲು

ತುಂಬಾ ಖುಷಿಯಾಗಿದ್ದಾಗ
ಮಕ್ಕಳಿಗೆ ಆಡಲೆಂದು
ಉಯ್ಯಾಲೆ ಕಟ್ಟಿ ಕೊಡಲು

ಹೀಗೆ ಅಪ್ಪ
ಹಗ್ಗವನ್ನು ಬಳಸಲು
ಬಗೆ ಬಗೆಯಾಗಿ ಕಲಿತಿದ್ದರು

ಅಪ್ಪ ಕೊನೆಯ
ಸಲ ಹಗ್ಗ ಕಟ್ಟಿದ್ದು
ಮರದ ಕೊಂಬೆಯೊಂದಕ್ಕೆ

ಹೇಗೆ ಕಟ್ಟಿದರೆಂದು ನೋಡಿದವರಿಲ್ಲ
ಹಗ್ಗದ ಇನ್ನೊಂದು ತುದಿಯಲ್ಲಿ
ಅಪ್ಪ ನೇತಾಡುತ್ತಿದ್ದನ್ನಷ್ಟೇ
ಅಪ್ಪನ ಓರಗೆಯವರು
ಈಗಲೂ ಹಂಚಿಕೊಳ್ಳುತ್ತಾರೆ ನನ್ನೊಂದಿಗೆ

ತೀರಿಸಲಾಗದ ಸಾಲ
ಕುತ್ತಿಗೆ ಹಿಸುಕುವಾಗ
ಯಾರೂ ಒದಗದಿದ್ದಾಗ
ಅಪ್ಪನಿಗೆ ಒದಗಿದ್ದು ಒಂದು ಮಾರು ಹಗ್ಗ ಮಾತ್ರ

ಈಗಲೂ
ಹಗ್ಗ ನೋಡಿದಾಗ ಅಪ್ಪನೂ
ಅಪ್ಪನ ನೆನಪಾದಾಗ ಹಗ್ಗವೂ
ಜೊತೆಯಲ್ಲೇ ಚಿತ್ರವಾಗುತ್ತದೆ

ಈಗ ಈ ಕವಿತೆಯನ್ನೇ ತೆಗೆದುಕೊಳ್ಳಿ
ಖಂಡಿತವಾಗಿ ನಿಮಗೆ
ಈ ಕವಿತೆ ಹಗ್ಗದ ಕುರಿತೋ
ಅಪ್ಪನ ಕುರಿತಾಗಿಯೋ
ಎನ್ನುವ ಗೊಂದಲ ಹುಟ್ಟಿಸುವ ಹಾಗಿದೆ
ಇಲ್ಲವೇ?


-ಶಂಕರ ಎನ್ ಕೆಂಚನೂರು, ಕುಂದಾಪುರ
—–