ಅನುದಿನ ಕವನ-೧೦೬೧, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಮಹಾಮಹಿಮರು

ಮಹಾಮಹಿಮರು

ಹರಿದ ಬಟ್ಟೆ ಸುರಿದ ಜೊಲ್ಲು
ಸಿಕ್ಕುಗಟ್ಟಿದ ಕೂದಲು
ಪಿಚ್ಚುಗಟ್ಟಿದ ಕಣ್ಣು
ತುರಿಕೆಯಾ ಚರ್ಮದವರೇ
ದೇವರೆನುವ ಮತಯಾಚಕರಿವರು

ತುಂಬಿದ ಚೀಲ ಹರಿದರೂ
ಒತ್ತಿ ಒತ್ತಿ ಮತ್ತೆ ತುಂಬಿ
ಮೆತ್ತೆಗೆ ಮೈ ಕೊಡವಿ
ಎದ್ದು ಬೆಣ್ಣೆ ತಿಂದ ಕೈಯ
ಮತ್ತೊಬ್ಬರ ಬಾಯಿಗೆ ಒರಸೊ ಮತಾಂಧರಿವರು

ಹಸಿದ ಹೊಟ್ಟೆಯ ನರಳಾಟ ಕೇಳದೆ
ಕೇಕೆ ಶಿಳ್ಳೆ ಪಟಾಕಿಗಳ ಸಿಡಿಸಿ
ಹೊಟ್ಟೆ ಉರಿಸಿ ನಕ್ಕು ನಲಿವ
ಮದವೇರಿದ ಮದಕರಿಗಳಿವರು

ಅಹಂನ ಹಣೆಯ ಮೇಲೆ
ಚಿಗುರುತಿಹ ಕೊಂಬುಗಳಿಗೆ
ನೀರು ಉಳಿಸಿ ಪೋಸಿಸಿ ಬೆಳೆಸಿ
ಗಮ್ಮತ್ತಿನ ನೆತ್ತಿಯ ಮೇಲಿನ
ಕಣ್ಣಿಗೆ ಎಣ್ಣೆಯನುಣಿಸಿ
ಗೆದ್ದು ಗದ್ದುಗೆಯೇರಿದ ಮದಗಜಗಳಿವರು

ಹಗಲಿರುಳು ನಿದ್ದೆಯಿರದೆ
ಚಿಂತೆಗಳ ಪರದೆ ಹೊದ್ದು
ಸಂಸಾರ ಸಲಹುವ ಸೆರಗಿನೊಳಗಿನ
ನೆರಳಾಟದ ಸ್ವರಗಳೆದುರು
ಅಬ್ಬರದ ಆರ್ಭಟದ ಪ್ರಚಾರಕೆ
ಗಂಜಿ ನೀರಿನ ಸಿಂಚನ ಮಾಡುವ ಮದ್ದಾನೆಗಳಿವರು

ತುಂಬುತಿದೆ ಪಾಪ ಕರ್ಮಕಾಂಡಗಳ ಕೊಡವು
ಅರಿವಿನ ಬಾಗಿಲ ಕಾಯುವ
ಶ್ವಾನ ಸ್ಥಿತಿಯಲ್ಲಿದ್ದು
ಸಿಂಹವೇಷವ ಹಾಕಿ
ಬಿದ್ದ ಜಟ್ಟಿಯ ಮೀಸೆಯ ಮಣ್ಣ ಜಾಡಿಸಿ ಬೀಗುವ ಮಹಾಮಹಿಮರಿವರು

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ