ಬಳ್ಳಾರಿ, ನ.28: ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾದರೆ, ಸಂಗೀತ, ನೃತ್ಯ, ಕಲಾ ಪ್ರಕಾರಗಳು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದು ವಕೀಲ ಹಾಗೂ ಪೊಲೀಸ್ ಜಿಮ್ ಖಾನಾ ಅಧ್ಯಕ್ಷ ಕೆ.ಜಿತೇಂದ್ರ ಅಭಿಪ್ರಾಯಪಟ್ಟರು.
ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಮಂಜುನಾಥ ಲಲಿತ ಕಲಾ ಬಳಗ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಜರುಗಿದ ‘ಕನ್ನಡ ಸುವರ್ಣ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ನಿರಂತರವಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ. ವಿವಿಧ ಸಾಂಸ್ಕೃತಿಕ ಸಂಘಟನೆಗಳು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಉಳಿಸುವ ಕಾಳಜಿಯನ್ನು ಜತನದಿಂದ ಮುಂದುವರಿಸುವಂತಾಗಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಅವರು, ಗಣಿನೆಲದ ಸಾಂಸ್ಕೃತಿಕ ಗಟ್ಟಿತನ ಕುರಿತು ವಿವರಿಸಿದರಲ್ಲದೆ, ಪ್ರತಿಭಾನ್ವಿತ ಯುವ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಸಾಧನೆಯನ್ನು ಬಣ್ಣಿಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ವಿ.ಎಸ್.ಮರಿದೇವಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗೆ ಹಾರೈಸಿದರು.
ಶ್ರೀ ಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸತೀಶ್ ಎ. ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ನಿವೃತ್ತ ದೈಹಿಕ ಶಿಕ್ಷಕ ಸಿದ್ಧಲಿಂಗಸ್ವಾಮಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವಿ.ವಿ.ಗೌಡ ಕರೂರು ಹಾಗೂ ಚಂದ್ರಶೇಖರ ಗೌಡ ಕೋಳೂರು ಉಪಸ್ತಿತರಿದ್ದರು.
ಬಳಿಕ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಮತ್ತು ತಂಡದಿಂದ ಸುಗಮಸಂಗೀತ, ಎಸ್ ಕೆ ಆರ್ ಜಿಲಾನಿಬಾಷಾ ತಂಡದಿಂದ ಜಾನಪದ ಸಮೂಹ ನೃತ್ಯ ಹಾಗೂ ಗಣೇಶಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ ಪ್ರದರ್ಶನಗೊಂಡವು.
ಇದೇ ವೇಳೆ ಐಎಂಎ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಕೆ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳಾದ ಶಿಲ್ಪಾ ಮತ್ತು ಶ್ರಾವಣ್ ಕಾರ್ಯಕ್ರಮ ನಿರ್ವಹಿಸಿದರು.