ಬಳ್ಳಾರಿ : ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲು ಸಕಾಲ ಸಪ್ತಾಹ ಕಾರ್ಯಕ್ರಮವನ್ನು ನ.30 ರಿಂದ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ನರಕಟಣೆ ನೀಡಿರುವ ಅವರು.ನ.30ರಿಂದ ಡಿ.5 ರವರೆಗೆ ನಗಾರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳಲ್ಲಿ ಹಾಗೂ ಡಿ.7 ರಿಂದ ಡಿ.11 ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಪ್ತಾಹವನ್ನು ಆಚರಿಸಲಾಗುತ್ತದೆ.
ಈ ಸಪ್ತಾಹ ಕಾರ್ಯಕ್ರಮ ಮುಖ್ಯ ಉದ್ದೇಶ ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗಧಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಸಕಾಲ ತಂಡದಿಂದ ಕಛೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೋಢಿಕರಿಸಲು ಸಹಾಯವಾಣಿ ಕೇಂದ್ರದ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ಈ ಸಕಾಲ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 98 ಇಲಾಖೆ/ಸಂಸ್ಥೆಗಳ 1020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.