ಅನುದಿನ ಕವನ-೧೦೬೩, ಕವಿಯಿತ್ರಿ: ಭವ್ಯ ಕಬ್ಬಳಿ, ಬೆಂಗಳೂರು

ಸೋತು ನೋವನುಂಡವರೇ
ಗೆಲುವಿನ ಬಗ್ಗೆ
ಹೆಚ್ಚು ಬರೆದದ್ದು

ಸುಡು ಬೆಂಕಿಯನ್ನು
ಎದೆಯಲ್ಲಿ ಇಟ್ಟುಕೊಂಡವರೇ
ಬೆಳದಿಂಗಳ ಬಗ್ಗೆ
ಹೆಚ್ಚು‌ ಮಾತನಾಡಿದ್ದು

ಬಿದ್ದು ಗಾಯಗೊಂಡವರೇ
ಮುಲಾಮುಗಳ ಬಗ್ಗೆ
ಹೆಚ್ಚು ವಿಚಾರ ತಿಳಿಸಿದ್ದು

ಬಾಡಿದ ಮನಸ್ಸಿನವರೇ
ಸುತ್ತಲಿನವರ ಮುಖದಲ್ಲಿ
ಹೆಚ್ಚು ನಗುವ ಅರಳಿಸಿದ್ದು

ಇಲ್ಲಿ,‌
ಹೂವ ಚಿವುಟಿದ ಕೈ ಬೆರಳುಗಳ ರಕ್ತ
ಯಾರಿಗೂ ಕಾಣುವುದಿಲ್ಲ,
ನೊಂದವರಲ್ಲಿ ಹುಟ್ಟುವ ಕವಿತೆ
ಕೊಂದವರಲ್ಲಿ ಹುಟ್ಟುವುದಿಲ್ಲ

-ಭವ್ಯ ಕಬ್ಬಳಿ, ಬೆಂಗಳೂರು
——