ಕಿಂಡ್ಯಾಗೇನು ಕಂಡೀ ಕನಕ
ಕನಕ ನಿನಗ್ಯಾಕೋ ಹರಿಯ ಗೊಡವಿ
ಇರವ ಅರಿಯದೆ ಹೋಗಿ ಉರಿಯ ಹಿಡದಿ
ಅರಮನಿ ಇಳಿದು ಗುರುಮನಿ ಏರಿದಿ
ಗುರಿಯ ಹಂಬಲದಾಗ ಗುಡಿಯ ಮೈಲಿಗಿ ಆದಿ
ನಾನೆಂಬುದ ಮರತಿ ಮಳ್ಳ ಮುರಾರಿಯ ಬೆನ್ನ ಬಿದ್ದಿ
ಗಿಂಡ್ಯಾನ ಬ್ರಹ್ಮಾಂಡ ಬಿಟ್ಟು ಕಿಂಡ್ಯಾಗೇನು ಕಂಡಿ
ವಚನ ನಿನ ಹಿಂದ, ಬಾಯೊಳಗಾ ಕೀರ್ತನಾ
ಬೀರಪ್ಪನ ಗದ್ದಿಗೀ ಮ್ಯಾಲ ಬೃಂದಾವನಾ ಕಟ್ಟಿ
ಸೀಮಿ ಬಯಲ ಬಿಟ್ಟಿ, ಬೆಟ್ಟಡವಿ ಪಾಲಾದಿ
ದೊರೆ ಹಾರವರ ಅಂಗಳದಾಗ ದಾಸನಾದಿ
ಸಂಧ್ಯಾವಂದನ ನಿಷಿಧ, ಉಪವೀತಧಾರಿ?
ಶಂಖ ಜಾಗಟೆ ಸಂತೀ ಏಕತಾರಿ
ಮುಟ್ಟಿದ್ದೇನೋ ಕನಕ ನೀ ಮೆಟ್ಟಿದ್ದೇನೋ
ಪಂಕ್ತೀ ಕೊನೀಗೆ ನೀ ಅನ್ಯನಾದಿ, ನೀ ಧನ್ಯನಾದಿ.
-ಬಿ.ಪೀರ್ ಬಾಷ, ಹೊಸಪೇಟೆ
—–