ಅನುದಿನ ಕವನ-೧೦೬೫, ಕವಿಯಿತ್ರಿ: ರೇಣುಕಾ ರಮಾನಂದ, ಅಂಕೋಲಾ, ಕವನದ ಶೀರ್ಷಿಕೆ: ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ

ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ

ಸತ್ಯ ಸುಳ್ಳು
ಎರಡನ್ನೂ ಬೆರೆಸಿ
ಒಂದಿಷ್ಟು ಪದ್ಯ ಬರೆದೆ
ನಿನ್ನ ಬಗ್ಗೆ…..
ನೀನಾಗ ಊರುಬಿಟ್ಟು
ಓಡಿಹೋಗಿದ್ದೆ

ಚಿನ್ನಿದಾಂಡು ಮರಕೋತಿ
ಕಣ್ಣುಮುಚ್ಚಾಲೆ ಆಡುವಾಗ
ಇಲ್ಲದ ಪ್ರೀತಿ
ನೀನೆಲ್ಲೋ ದೇಶಾಂತರಕ್ಕೆ
ಹೋದಮೇಲೆ ಅಂಕುರಿಸಿ
ಚಂದ್ರ ತಾರೆ ಎಂದೆಲ್ಲ
ಕನವರಿಸುವಂತೆ ಮಾಡಿ
ನನ್ನ ತಲೆಕೆಡಿಸಿತೆಂದು
ಊರವರೆಲ್ಲ ನಗಾಡಿಕೊಂಡರು

ತಂಗಾಳಿ ಬೆಳದಿಂಗಳು
ಎಂದೆಲ್ಲ ಸುಳ್ಳುಸುಳ್ಳೇ
ಇನ್ನೊಂದಿಷ್ಟು ಬರೆದು
ರಾಶಿಹಾಕಿಕೊಂಡೆ

‘ವೆರೈಟಿ ಅಡುಗೆಗಳೆಲ್ಲ ಈಗೀಗ ನಾಪತ್ತೆಯಾಗಿ
ಬರೀ ಅನ್ನ ಸಾರು..!?
ಓಡಿಹೋದವನ ಬಗ್ಗೆ ಪದ್ಯ
ಬರೆಯುವುದನ್ನು ಬಿಡು’
ಎಂದು ಮನೆಮಂದಿಯೆಲ್ಲ ಮುಖಗಂಟಿಕ್ಕಿ
ಮಾತುಬಿಟ್ಟರು
ಒಂದೇಹೊತ್ತು ಒಂದಿಷ್ಟು ಊಟಹಾಕಿದರು

ತರಹೇವಾರಿ ಕುದುರೆಜುಟ್ಟಿನ ಹೆಣ್ಣುಗಳ ಹಿಂದೆ ನೀ ಖಾನೇಸುಮಾರಿ ತಿರುಗುತ್ತಿದ್ದೀ
ಎಂಬ ಸುದ್ಧಿ ಬಂತು
ನಾ ನಂಬಲಿಲ್ಲ
ಉಪ್ಪುಮೂಟೆ ಆಡುವಾಗ
ತಪ್ಪಿಯೂ ನೀ ನನಗೆ
ಒಂದಾದರೂ ಮುತ್ತುಕೊಟ್ಟು ಓಡಿಹೋದ
ನೆನಪಿಲ್ಲ

ಪದ್ಯವನ್ನೇ ತಿಂದು ಕುಡಿದು ಉಸಿರಾಡಿ
ಒಂದಷ್ಟುದಿನ ಚನ್ನಾಗಿರೋಣವೆಂದುಕೊಂಡಿದ್ದೆ
ಎಲ್ಲೂ ಫಲಕಾರಿಯಾಗದೇ ನಿನ್ನ ಊರಿಗೇ
ಹೊತ್ತುಕೊಂಡು ಬರುತ್ತಿದ್ದಾರೆಂಬ
ವಾರ್ತೆ ಬಂತು
ದಿನ ಎಣಿಸುತ್ತಿದ್ದಾನಂತೆ
ಇಂದೋ ನಾಳೆಯೋ ಅಂತೆ
ಜನ ನನ್ನೆದುರಿಗೇ ಮಾತಾಡಿಕೊಂಡರು
ಕಾಲೆಳೆಯುತ್ತ ..ನಡುಗುತ್ತ ..ನಡುರಾತ್ರಿ
ಹೋಗಿ ಗಲ್ಲ ಹೊಕ್ಕಿದ ನಿನ್ನ ನೋಡಿಬಂದೆ

ಒಟ್ಟೂ ನಕ್ಷತ್ರಗಳಂತಹ ಉಲ್ಕೆಗಳಂತಹ
ಪದ್ಯಗಳನ್ನೊಯ್ದು ನಿನ್ನ ದಿಂಬಿನಡಿಗಿಟ್ಟು
ಬಂದದ್ದು ಯಾರಿಗೂ ಗೊತ್ತಿರಲಿಕ್ಕಿಲ್ಲ
ವೆಂದುಕೊಂಡಿದ್ದೆ

ನಿಮ್ಮವು ಒಳ್ಳೆಯ ಪದ್ಯಗಳು
ಹೊತ್ತಿಗೊದಗಿದವು
ಕೀವು ಒರೆಸಲು ,ವಾಂತಿ ಬಳಿಯಲು
ತುಂಬಾ ಲಾಗೂ ಬಿದ್ದವು ಎನ್ನುತ್ತ
ಆಸ್ಪತ್ರೆಯವರು ಮನೆಗೇ ಬಂದು
ಫಲತಾಂಬೂಲ ನೀಡಿ ಸನ್ಮಾನಿಸಿದರು
ದಿನಪತ್ರಿಕೆಗಳಿಗೆಲ್ಲ ಸುದ್ಧಿಮಾಡಿದರು

ತಿಂದು ಕುಡಿದು ಉಸಿರಾಡಿಕೊಳ್ಳೋಣವೆಂದರೆ
ಪದ್ಯಗಳೂ ಇಲ್ಲ ಈಗ
ಮನೆಯಲ್ಲಿ
ಎರಡ್ಹೊತ್ತಿನ ಊಟದ ಷರತ್ತು ಹಾಕಿ
ರಾಜಿಯಾದೆ
ನಿನ್ನ ಶವಯಾತ್ರೆ
ಮನೆಮುಂದೆ ಹೊರಟದಿನ
ಮತ್ತೆ ತರತರದ ನಳಪಾಕಗಳೆಲ್ಲ
ಆರಂಭವಾದವು

-ರೇಣುಕಾ ರಮಾನಂದ, ಅಂಕೋಲಾ
*****