ಅನುದಿನ ಕವನ-೧೦೬೬, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ . ಹುನಗುಂದ, ಕಾವ್ಯ ಪ್ರಕಾರ: ಟಂಕಾಗಳು

ಟಂಕಾಗಳು

ಪಕ್ಕದಲ್ಲಿದ್ದ
ಆ ಕಡತ ಮುಂದಿನ
ಮೇಜು ಸೇರಲು
ವಾರ, ತಿಂಗಳು, ವರ್ಷ
ಸಾವಿರ ಲಕ್ಷಗಳು
***
ಮೂರ್ತಿಯಾಗಿಸೋ
ಪೆಟ್ಟುಗಳ ಯಾತನೆ
ಸಂಕಟಗಳ
ಸಹಿಸಿಕೊಂಡರೇನೇ
ನೀ ಪೂಜಿಸಲ್ಪಡುವೆ
***
ʼಟಂಕಾʼ ಎಂಬುದು
ಪರ್ಷಿಯನ್‌ ಜಪಾನೀ
ಕಾವ್ಯ ಪ್ರಕಾರ
ಮೂವತ್ತೊಂದು ಅಕ್ಷರ
ಚಲುವೆಯ ಒಡವೆ
***
ದೂಷಿಸಬೇಡಿ
ಮಕ್ಕಳಾಗದಿದ್ದರೆ
ವಿನಾಕಾರಣ
ಪತ್ನಿಯನ್ನು, ಕಾರಣ
ನೀವೂ ಇರಬಹುದು
***
ಅಪಘಾತದ
ಬಿದ್ದು ಒದ್ದಾಡುವ ಆ
ದೃಶ್ಯ ಸುರುಳಿ
ಹಂಚಿಕೆ ಸಂಖ್ಯೆ ಏರಿ
ಮಾನವತೆ ಇಳಿಕೆ
***
ಸಾವೂ ಬಾರದು
ನೋವೂ ಆಗದೆಂಬಂತೆ
ಬೀಗಿರುತ್ತೇವೆ
ಸಣ್ಣ ಅಲುಗಾಟಕೂ
ನಲುಗಿ  ಬಾಗುತ್ತೇವೆ
***
ನನ್ನೆದೆಯಲಿ
ಸದಾ ಹವಾಮಾನದ
ಏರಿಳಿತವೇ
ನೀ ಬುಸುಗುಟ್ಟಿದರೆ
ಝಳ, ನಕ್ಕರೆ ಚಳಿ

***
ಸೂರ್ಯ ಚಂದ್ರರ
ಒಂದೇ ತಿಂಗಳಲ್ಲಿಯೇ
ಭೇಟಿಯಾಗುವ
ಆಸೆ ಈ ಭಾರತಕೆ
ನಮೋ ಇಸ್ರೋ ತಂಡಕೆ

-ನಿಂಗಮ್ಮ ಭಾವಿಕಟ್ಟಿ . ಹುನಗುಂದ
——