ಅನುದಿನ ಕವನ-೧೦೬೭, ಕವಿಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಸಂಜೆ

ಒಂದು ಸಂಜೆ

ಮುಗಿಲಿನ  ಬಯಲಾಗ ಬಣ್ಣದ
ಓಕುಳಿ  ಸುsರೀsದ  ಹರಡಿತ್ತ
ಎದೆಯ ಗೂಡಿನ ಸಂದಿಯೊಳಗ
ಜೀಕಳಿ  ತಾ ಛಲ್ಲಂತ  ಚಿಮ್ಮಿತ್ತ ॥
ಬಾನ ರಂಗಿನ  ಗುಂಗಿನ್ಯಾಗ
ಮತ್ತ  ಸಂಜಿಯ ಮಬ್ಬಿನ್ಯಾಗ
ಅತ್ತ  ಇತ್ತ  ಹಾರಿ ಜಿಗಿದು
ಮನ ಸಂಚಾರ  ಹೊರಟಿತ್ತ॥

ನೆನಪು ಕನಸು ಹೊದ್ದುಕೊಂಡು
ಸವಿ ಸವಿ  ಮಾತ ನೆನಸಿಕೊಂಡು
ಬೆಳಕಿನ  ಗದ್ದಲ  ದೂರ  ಸರಿಸಿ
ದಿನ  ತಣ್ಣಗೆ  ಮಲಗಿತ್ತ
ಕನಸಿನ್ಯಾಗ  ಮುಳುಗಿ  ತೇಲಿ
ತುಟಿಯಂಚಿನ್ಯಾಗ  ಸಣ್ಣಗೆ  ನಗತಿತ್ತ ॥

ಚಂದ್ರಕಾಳಿ  ಸೀರಿಯುಟ್ಟು
ಕೆಂಪು ರಂಗಿನ  ಸೆsರಗ ಬೀಸಿ
ಕತ್ತಲ  ಬಾಲೆ ಮೆಲ್ಲ ಮೆಲ್ಲಕ
ಹೊಳ್ಳಿ ಹೊಳ್ಳಿ ನೋಡತಿತ್ತ
ಕತ್ತು  ಎತ್ತಿ  ಚಾಚಿ  ನಿಂತು
ಯಾಕೋ ಏನೋ  ದೂರದತ್ತ ದಿಟ್ಟಿ ನೆಟ್ಟಿತ್ತ ॥

ಹಕ್ಕಿ ಗೂಡಿನ್ಯಾಗ  ಜೋಡಿ  ಹಕ್ಕಿ
ಪಿಸು ಪಿಸು ಮಾತನಾಡತಿತ್ತ
ಗುಸುಗುಸು ಪಿಸು ಪಿಸು ಆಲಿಸುತ್ತ
ಕತ್ತಲ ಬಾಲೆ ಕsಣ್ಣಿsನ್ಯಾಗ
ಫಳಕ್ಕೆಂದು ತಾ ಮಿಂಚು ಹೊಳದಿತ್ತ
ಕಂಡೂ ಕಾಣದ  ಭಂಗಾರದೆಳಿಯಂಥ  ನಗೀ ಮೂಡಿತ್ತ ॥

ಕತ್ತಲ ಬಾಲೆ  ನಗೀ ಬೆಳಕು
ಮುಗಿಲ ತುಂಬ ಹಬ್ಬಿ ಹರಡಿ
ಆಕೀ  ನಲ್ಲಗ ಗದ್ದಲ ಇಲ್ಲದೇ
ಸುಳಿವು ಕೊಡದೆ  ಸುದ್ದಿ ನೀಡಿತ್ತ
ಮುಗಿಲಿನ  ಬಯಲಾಗ ಬಂದು
ಆತ ನಗು ಬೀರಿದ್ದ ಬಾಲೆಯ ಮುಖಾ ಹೊಳದಿತ್ತ ॥

ಏನೀ  ಸರಸಾ ಎಂಥಾ ಆಟಾ
ಸಂಚಾರ  ಹೊರಟ ಮನಸು
ಮುಸಿ ಮುಸಿ  ನಕ್ಕಿತ್ತ
ತಿರು ತಿರುಗಿ ನೋಡಿತ್ತ
ಮಾಯಾ  ಮೋಹದಾಟದಂತ
ತಿಳಿಯಲಾರದ ಒಗಟು ಅಂತ
ನೆಟ್ಟಗ  ತನ್ನ ಠಾವಿನ  ದಾರಿ ಹಿsಡದ ನಡದಿತ್ತ ॥

-ಸರೋಜಿನಿ ಪಡಸಲಗಿ
ಬೆಂಗಳೂರು

[ಸಂಜೆಯ ಚಿತ್ರ: ಸಿ.ಮಂಜುನಾಥ]
*****