ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ: ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯನಗರ(ಹೊಸಪೇಟೆ), ಡಿ.4: ಸರಕಾರಿ ಪ್ರಥಮ‌ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ‌ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅತಿಥ ಉಪನ್ಯಾಸಕರು ಡಾ.ಪುನೀತ್ ರಾಜಕುಮಾರ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ತಮ್ಮ ಬೇಡಿಕೆ ನ್ಯಾಯಯುತವಾಗಿದ್ದು ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿದರು. ಇಂದಿನಿಂದ ಆರಂಭವಾಗಿರುವ ಅಧಿವೇಶನದಲ್ಲಿ ನಿರ್ಣಯಕೈಗೊಳ್ಳುವಂತೆ ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದರು.


ಇಂದಿನ ಪರಿಸ್ಥಿತಿಯಲ್ಲಿ ಅಭದ್ರತೆಯಲ್ಲಿ ಬದುಕುವುದು ಅತ್ಯಂತ ಕಷ್ಟಕರವಾಗಿದೆ. ಕೂಡಲೇ ಖಾಯಂಗೊಳಿಸಿ ಉದ್ಯೋಗದ ಭದ್ರತೆಯನ್ನು ನೀಡುವಂತೆ ಮನವಿ ಮಾಡಿದರು. ಒಂದು ವೇಳೆ ಎರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳದಿದ್ದರೆ  ಬೆಳಗಾವಿಯ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರಾವಾಧ್ಯಕ್ಷ ಟಿ.ದುರುಗಪ್ಪ, ಜಿಲ್ಲಾಧ್ಯಕ್ಷ ಗುಜ್ಜಲ ಹುಲುಗಪ್ಪ, ಪದಾಧಿಕಾರಿಗಳಾದ ಎ.ಮಲ್ಲಿಕಾರ್ಜುನ, ಎಂ.ಶಿವಮೂರ್ತಿ, ಸೋಮೇಶ ಉಪ್ಪಾರ, ಡಾ.ಷಣ್ಮುಖಪ್ಪ, ಡಾ.ನಾಗವೇಣಿ ಸೊಸಲೆ, ಗಿರಿಜಾ, ಬಳ್ಳಾರಿ ಜಿಲ್ಲಾ ಘಟಕದ ಮುಖಂಡರಾದ ಸಿದ್ದೇಶ್ ಸೇರಿದಂತೆ ಮರಿಯಮ್ಮನಹಳ್ಳಿ, ಹಡಗಲಿ,ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.
—–