ಬಳ್ಳಾರಿ, ಡಿ.6: ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ವಿಜಯನಗರ ಶ್ರೀಕೃಷ್ಣ ದೆವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಹೇಳಿದರು.
ಹಂದ್ಯಾಳು ಶ್ರೀ ಮಹಾದೇವತಾತ ಕಲಾ ಸಂಘ ಮಂಗಳವಾರ ಸಂಜೆ ಸಮೀಪದ ಶ್ರೀಧರಗಡ್ಡೆ ಗ್ರಾಮದ ಶ್ರೀಮಾರೆಮ್ಮ ದೇವಸ್ಥಾನ ಆವರಣದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾರ್ತೀಕ ಮಾಸದ ಸಾಂಸ್ಕೃತಿಕ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಯುವಜನರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಪಾಲ್ಗೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳ ಬಹುದು ಎಂದು ಅಭಿಪ್ರಾಯ ಪಟ್ಟರು.
ಹಂದ್ಯಾಳು ಶ್ರೀ ಮಹಾದೆವತಾತ ಕಲಾ ಸಂಘ ಕಾರ್ತೀಕ ಮಾಸದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವುದು ಅರ್ಥಪೂರ್ಣ. ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರ ಪ್ರೀತಿಗೆ ಮಣಿದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಮಾತನಾಡಿ, ಬಳ್ಳಾರಿ ಮಹಾನಗರಕ್ಕೆ ತೀರ ಸಮೀಪದಲ್ಲಿರುವ ಶ್ರೀಧರಗಡ್ಡೆ ಗ್ರಾಮ ತನ್ನ ಗ್ರಾಮ ಚಹರೆ, ಮುಗ್ಧತೆಯನ್ನು ಉಳಿಸಿಕೊಂಡು ಸಾಹಿತ್ಯ, ಕಲೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಹಿರಿಯ ಮುಖಂಡರು, ಯುವ ಮುಂದಾಳುಗಳು ತನುಮನದಿಂದ ಸಭೆ, ಸಮಾರಂಭಗಳ ಯಶಸ್ವಿಗಾಗಿ ಶ್ರಮಿಸುತ್ತಾರೆ ಎಂದರು.
ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿರುವ ಪುರುಷೋತ್ತಮ್ ರಂಗ ಕಲೆಗಳ ಅಭಿವೃದ್ದಿಗೆ ದುಡಿಯುತ್ತಿದ್ದಾರೆ. ಶ್ರೀ ಮಹಾದೇವ ಕಲಾ ಸಂಘವು ಬರುವ ವರ್ಷ ಎರಡು ದಶಕಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ನಾಡಿನಾದ್ಯಂತ ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಸರು ಮಾಡಲಿ ಎಂದು ಮಂಜುನಾಥ್ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಳ್ಳಿ ಸಿದ್ಧಲಿಂಗಪ್ಪ, ಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಪಿ.ನಿರಂಜನ್, ಗ್ರಾಪಂ ಸದಸ್ಯ ಜಿ. ಬಸವರಾಜ್, ಸಹಕಾರ ಸಂಘಗಳ ಮುಂದಾಳು ಕೆ. ವರಬಸಪ್ಪ, ಹವ್ಯಾಸಿ ಛಾಯಾಗ್ರಾಹಕ ಸತೀಶ ಮರಾಳು, ಜಾಹೀರಾತು ವ್ಯವಸ್ಥಾಪಕ ಜಯತೀರ್ಥ, ಹಂದ್ಯಾಳ್ ಗ್ರಾಪಂ ಸದಸ್ಯ ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ಗ್ರಾಮದ ಹಿರಿಯ ಕಲಾವಿದರಾದ ಕರ್ಚೇಡು ಮರೆಪ್ಪ ಮತ್ರು ಜಂಬನಗೌಡ ಅವರನ್ನು ಕಲಾ ಸಂಘದ ಪರವಾಗಿ ಕುಲಸಚಿವರು ಸನ್ಮಾನಿಸಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಗ್ರಾಮದ ಕು. ಅರ್ಚನ ಮತ್ತು ತಂಡ ಜಾನಪದ ನೃತ್ಯ, ಕು. ಪ್ರೇಮಾ ಮತ್ತು ತಂಡ ಕೋಲಾಟ ಪ್ರದರ್ಶಿಸಿತು.
ನಾಟಕ: ಸಿರಿಗೇರಿ ಧಾತ್ರಿ ರಂಗ ಸಂಸ್ಥೆ ಪ್ರಸ್ತುತ ಪಡಿಸಿದ ರಂಗಕರ್ಮಿ ಮಹಾಂತೇಶ್ ರಾಮದುರ್ಗ ಅವರು ರಚಿಸಿ ನಿರ್ದೇಶಿಸಿರುವ ‘ಸೋರುತಿಹದು ಸಂಬಂಧ’ ನಾಟಕ ಗ್ರಾಮಸ್ಥರ ಗಮನ ಸೆಳೆಯಿತು.
ಚಪ್ಪಾಳೆ ಗಿಟ್ಟಿಸಿದ ರುದ್ರೇಶ್ ಮತ್ತು ಹಂದ್ಯಾಳ್: ಕುಲಸಚಿವ ರುದ್ರೇಶ್ ಅವರ ವೀರಮದಕರಿ ನಾಟಕದ ಸಂಭಾಷಣೆ ಮತ್ತು ಪುರುಷೋತ್ತಮ ಅವರ ರಕ್ತರಾತ್ರಿ ನಾಟಕದ ಸಂಭಾಷಣೆ ನೆರೆದಿದ್ದ ಕಲಾಭಿಮಾನಿಗಳ ಮನಸೂರೆಗೊಂಡು ಚಪ್ಪಾಳೆ ಗಿಟ್ಟಿಸಿದವು.
ಬಯಲಾಟ ಕಲಾವಿದ ಜಂಬನಗೌಡ ಅವರು ವೀರ ಅಭಿಮನ್ಯು ಕಾಳಗದ ಸಂಭಾಷಣೆ ಗಮನ ಸೆಳೆಯಿತು.
ಬಸವೇಶ್ವರ ಯುವಕ ಸಂಘದ ಮುಖಂಡ ದೊಡ್ಡ ಬಸಪ್ಪ ಪ್ರಾರ್ಥಿಸಿದರು.
ಶ್ರೀ ಮಹಾದೇವ ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಶೃತಿ ಹಂದ್ಯಾಳ್ ವಂದಿಸಿದರು.
*****