ಅನುದಿನ ಕವನ-೧೦೭೦, ಕವಿ:ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ: ಮಹಾನಾಯಕ (ಗಜಲ್)

ಬಾಬಾ ಸಾಹೇಬರ ನೆನಪಿನೊಂದಿಗೆ………

ಮಹಾನಾಯಕ (ಗಜಲ್)

ಶೋಷಿತರ ಬಾಳಿಗೆ ಬೆಳಕು ಬೀರಿದ ಸೂರ್ಯನೇ ಮಹಾನಾಯಕ.
ಉರಿದ ಬದುಕಿಗೆ ತಂಪು ನೀಡಿದ ಚಂದ್ರನೇ ಮಹಾನಾಯಕ.

ಜಾತಿಸಮುದ್ರಕ್ಕಿಳಿದು ಸಮತೆಯ ಮುತ್ತುರತ್ನ ತರಬಯಸಿದವನು
ಏಕತೆಯ ಗ್ರಂಥಕ್ಕೆ ಜನ್ಮ ನೀಡಿದ ಲೇಖಕನೇ ಮಹಾನಾಯಕ.

ಮಾತಿಲ್ಲದವರಿಗೆ ಮಾತಾಗಿ ದಿಕ್ಕಿಲ್ಲದವರಿಗೆ
ತಾಯಾಗಿ
ಪ್ರತಿರೋಧದ ಬೀಜ ಬಿತ್ತಿದ ಕ್ರಾಂತಿ ಒಡೆಯನೇ
ಮಹಾನಾಯಕ.

ಅಸ್ಪೃಶ್ಯ ಬೆಂಕಿಯಲ್ಲಿ ಬೆಂದವರ ಗಾಯ ಮಾಯಿಸಿದ  ಅವಧೂತ
ಅಂತಃಕರಣದ ಮಂತ್ರ ಪಠಿಸಿದ ನಿಜದೈವನೇ ಮಹಾನಾಯಕ.

ಶತಮಾನಗಳ ಗರ್ವಕ್ಕೆ ಕೊಡಲಿಯೇಟು ಕ್ರೌರ್ಯಕ್ಕೆ ಛಡಿಯೇಟು
ಶ್ರೇಷ್ಟತೆಗೆ ಚಳಿ ಬಿಡಿಸಿದ ಶಸ್ತ್ರ ಚಿಕಿತ್ಸಕನೇ ಮಹಾನಾಯಕ.

ಕರಾಳದಿನಗಳ ಹಿಮ್ಮೆಟ್ಟಿಸಿ ಬೇಗುದಿಯ ಹೊಡೆದೋಡಿಸಿ
ದಮನಿತರ ತಲೆಯೆತ್ತಿ ನಿಲ್ಲಿಸಿದ ಛಲವೀರನೇ ಮಹಾನಾಯಕ.

ಸ್ವಾಭಿಮಾನವ ಉಸಿರಾಡಿ ಸಿಡಿಲಿಗೂ ಬೆಚ್ಚದ ಹೆಮ್ಮರನಾದವನು
ಧರ್ಮಾಂಧತೆಯ ಕೋಳ ಕಡಿದ ಬೆಳ್ಳಿಕಿರಣನೇ ಮಹಾನಾಯಕ.


-ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ
—–
ಬಾಬಾ ಸಾಹೇಬರ ನೆನಪಿನೊಂದಿಗೆ………