ಬಳ್ಳಾರಿ: ಭಾರತರತ್ನ ಬಾಬಾ ಸಾಹೇಬ ಡಾ.ಬಿ.ಆರ್ ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನದ ಅಂಗವಾಗಿ ಬುಧವಾರ ಸಂಜೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್, ವಿಎಸ್ ಕೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಮಾಲಾರ್ಪಣೆ ಮೂಲಕ ಗೌರವಿಸಿದರು.
ನಗರದ ಡಾ. ಅಂಬೇಡ್ಕರ್ ಭವನದ ಆವರಣದಲ್ಲಿರುವ ಪೂಜ್ಯರ ಪ್ರತಿಮೆ ಬಳಿ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಮತ್ತು ಇತರೆ ಗಣ್ಯರೊಂದಿಗೆ ದೀಪ ನಮನ ಸಲ್ಲಿಸುವ ಮೂಲಕ ಬಾಬಾಸಾಹೇಬರಿಗೆ ವಿಶಿಷ್ಟವಾಗಿ ಶ್ರದ್ಧೆಯಿಂದ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜೇಂದ್ರ ಪ್ರಸಾದ್ ಅವರು, ವಿಶ್ವದಲ್ಲೇ ಡಾ. ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನ ಉತ್ಕೃಷ್ಟವಾಗಿದೆ.
ದೇಶದ ಎಲ್ಲಾ ಜನರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಟ್ಟ ಮಹಾಪುರುಷ ಎಂದು ಕೊಂಡಾಡಿದರು.
ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ ಬಾಬಾಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೌಲ್ಯ, ಚಿಂತನೆಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕು ಎಂದರು.
ಬಾಬಾಸಾಹೇಬರು ಅವರ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ಆದರ್ಶ, ವಿಚಾರಗಳೊಂದಿಗೆ ಸದಾ ದೇಶದ ಜನರೊಂದಿಗೆ ಬದುಕಿದ್ದಾರೆ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಬೇಕು ಎಂದು ಹೇಳಿದರು.
ವಾರ್ಡನ್ ಅಂಬಿಕಾ ಅವರು ಮಾತನಾಡಿ ಡಾ.ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ, ಸಮಾನತೆ ಕಲ್ಪಿಸಲು ತಮ್ಮ ಕಾನೂನು ಸಚಿವ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಸಮಾನತೆಯ ಹರಿಕಾರ ಡಾ.ಅಂಬೇಡ್ಕರ್ ಅವರಿಲ್ಲದೇ ಹೋಗಿದ್ದರೆ ನಾನು ಶಿಕ್ಷಣ, ನೌಕರಿ ಪಡೆದು ಇಲ್ಲಿ ನಿಂತು ಮಾತನಾಡಲಾಗುತ್ತಿರಲಿಲ್ಲ ಎಂದು ಭಾವುಕರಾದರು.
ಮತ್ತೋರ್ವ ವಾರ್ಡನ್ ಶಿವಪ್ಪ ಅವರು ಮಾತನಾಡಿ ಬಾಬಾಸಾಹೇಬರ ಆಶಯಗಳನ್ನು ಅನುಷ್ಠಾನಗೊಳಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ನೌಕರನಾಗಿರುವುದಕ್ಕೆ ಡಾ. ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕಿ ಮೀನಾಕ್ಷಿ ಕಾಳೆ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಿಬ್ಬಂದಿ ಉಷಾ, ಪೊಲೀಸ್ ಇಲಾಖೆಯ ಪರಶುರಾಮ, ಉಪನ್ಯಾಸಕ ಡಾ. ನಾಗಪ್ಪ, ಎಂಪಿ.ಎಡ್ ವಿದ್ಯಾರ್ಥಿ ಶಿವಪುತ್ರ ಕೊಂಚಿಗೇರಿ ಇಲಾಖೆಯ ಮತ್ತಿತರ ಸಿಬ್ಬಂದಿ ಇದ್ದರು.
—–