ಅಚ್ಚಳಿಯದ ಕಲೆಯನ್ನು ಬಿಟ್ಟುಹೋದ ಮೇರು ಕಲಾವಿದೆ ಲೀಲಮ್ಮ…! ನುಡಿ ನಮನ: ಡಿ ಎಸ್.ಚೌಗಲೆ, ಹಿರಿಯ ಸಾಹಿತಿ-ರಂಗಕರ್ಮಿ, ಬೆಳಗಾವಿ, ಚಿತ್ರಕೃಪೆ: ಬಣ್ಣ ಆರ್ಟ್ಸ್, ಬೆಂಗಳೂರು

ಎಪ್ಪತ್ತರ ದಶಕ. ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿಯ ಹಲವು ಚಿತ್ರಗಳು, ಅಂದಿನ ಅವರ ಅಭಿನಯದ ಜನಪ್ರಿಯ ಹಾಡುಗಳನ್ನು ರೇಡಿಯೋಗಳಲ್ಲಿ ಕೇಳಿ ಆನಂದಿಸುವ ಕಾಲ. ಆಗ ರೇಡಿಯೋ,ಕಂಪನಿ ನಾಟಕಗಳು,ಸಂಗ್ಯಾ ಬಾಳ್ಯಾ,ಶ್ರೀಕೃಷ್ಣ ಪಾರಿಜಾತ ಸಣ್ಣಾಟಗಳೇ ನಮ್ಮಂಥ ಹಳ್ಳಿಗರ ರಂಜನೆ,ಬೋಧನೆಯ ಭಾಗವಾದವುಗಳು.                                         ಡಾ.ರಾಜಕುಮಾರ್ ಅವರು ನೈತಿಕ ಮೌಲ್ಯಗಳನ್ನು ತಮ್ಮ ಚಿತ್ರಗಳಿಂದ ಅಂದಿನ ಪೀಳಿಗೆಗೆ ನೀಡಿದವರು. ಆಗ ಲೀಲಾವತಿ ರಾಜ್‌ಕುಮಾರ್ ಬಹುಪಾಲು ಪ್ರೇಕ್ಷಕರ ಮನಗೆದ್ದಿದ್ದ ಕಲಾವಿದರು.                                ಲೀಲಾವತಿ, ಯುವ ಕಲಾವಿದೆಯಾಗಿ ಒಂದು ತೂಕದ ಅಭಿನಯ,ಮಾತುಗಾರಿಕೆಯ ಮುದ್ರೆ ಒಂದು ಬಗೆಯದಾದರೆ; ಪಕ್ವಗೊಂಡ ಹಿರಿಯ ಕಲಾವಿದೆಯ ಒಟ್ಟು ಅಭಿವ್ಯಕ್ತಿಯು ವಿಭಿನ್ನವೇ. ಅವರ ಆರು ನೂರಕ್ಕು ಹೆಚ್ಚಿನ ಚಿತ್ರಗಳಲ್ಲಿ ಉದಾಹರಣೆಗೆ ಇಲ್ಲಿ ಎರಡು ಮಗ್ಗುಲಿನ ಅವರ ಅಭಿನಯ ಸಾಮರ್ಥ್ಯವನ್ನು ನೋಂದಾಯಿಸಲು ಇಷ್ಟ ಪಡುವೆ. ಒಂದು ‘ಭಕ್ತ ಕುಂಬಾರ’-ಭಕ್ತಿ ಪ್ರಧಾನ ಪಾತ್ರಕ್ಕೆ ಲೀಲಾವತಿಯವರು ನ್ಯಾಯ ಒದಗಿಸಿರುವುದು ಒಂದು ಬಾಜುವಾದರೆ, ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಯಜಮಾನಿಕೆಯ ಠೇಂಕಾರ ವ್ಯಕ್ತಿತ್ವದ ಪಾತ್ರ ಕಟ್ಟಿಕೊಡುವುದು ಇನ್ನೊಂದುಬಾಜು.

ಅಬ್ಬಾ!
ಹೀಗೆ ಎರಡೂ ಭಿನ್ನ ಮಾದರಿಯ ತುದಿಗಳು.
ಗೋರಾ ಕುಂಬಾರ ವಿಠ್ಠಲನ ಭಕ್ತಿಯಲ್ಲಿ ಮುಳುಗಿ ಹಾಡುತ್ತ ಕುಣಿದು ಇನ್ನೇನು ಅಂಬೆಗಾಲು ಹಾಕುತ್ತ ಬರುತ್ತಿರುವ ಮಗುವನ್ನೇ ಕೆಸರಲ್ಲಿ ತುಳಿದು ಬಿಡುತ್ತಾನೆ ಎನ್ನುವಾಗ ಲೀಲಾವತಿ ಧಿಡೀರನೆ ನೆಗೆದು ಗೋರಾನನ್ನು ದೂಕುವ ದೃಶ್ಯ ಯಾವತ್ತೂ ಮನದಲ್ಲಿ ಉಳಿದಿದೆ. ಆದರೆ ಯಾವ್ಯಾವ ಕಾರಣಗಳಿಗೆ ಅದು ಸ್ಮೃತಿಯಲ್ಲಿದೆ ಎಂಬುದು ಮಾತ್ರ ಗೊತ್ತಿಲ್ಲ.
ಗೋರಾನ ಮಡದಿಯ ಪಾತ್ರವು ಬಯಸುವ ರೋದನೆ, ಯಾತನೆಯನ್ನು ಬಲು ಗಟ್ಟಿಯಾಗಿ ನಿರ್ವಹಿಸಿರುವರು. ಹಾಗೆಯೇ ನಾ ನಿನ್ನ ಮರೆಯಲಾರೆ ಚಿತ್ರದ ಸಿರಿವಂತ ಯಜಮಾನಿಕೆಯ ಗತ್ತಿನ ಪಾತ್ರ! ಕಥಾನಾಯಕಿ ಸಂಗಡ ಕದ್ದು ಕೂಡುವ ದೃಶ್ಯದಲ್ಲಿ ರಾಜ್ ಕುಮಾರ್ ಮತ್ತು ಲೀಲಾವತಿಯವರ ಸಂವಾದಗಳ ಜುಗಲಬಂದಿ-ಅಂದಿನ ದಿನಗಳ ಹೈಲೈಟ್ ಆಗಿತ್ತು. ‘ ಈ ಗೊಡ್ಡು ಬೆದರಿಕೆಗಳಿಗೆ ಬಗ್ಗೊನಲ್ಲ ನಾನು’ ರಾಜ್ ಅಂದಾಗ ಲೀಲಾವತಿ ಅದೇ ಟೈಮಿಂಗಿನಲ್ಲಿ ತಾಕತ್ತಿನ ಉಗ್ರರೂಪದ ಉತ್ತರ ಕೊಡುವ ದೃಶ್ಯ ಎಂದೂ ಮರೆಯಲಾರದು.  ನನ್ನ ತಾಯಿ ಬಹು ಇಷ್ಟ ಪಡುತ್ತಿದ್ದ ಕಲಾವಿದೆ ಲೀಲಮ್ಮ… ಇಂಥ ಮೇರು ಕಲಾವಿದೆ ವೃಧ್ಯಾಪ್ಯದಿಂದ ಕಾಲವಶರಾಗಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

-ಡಿ.ಎಸ್ ಚೌಗಲೆ, ಹಿರಿಯ ರಂಗಕರ್ಮಿ, ಸಾಹಿತಿ, ಬೆಳಗಾವಿ