ಅರವತ್ಮೂರು ಕವಿತೆ!
ಕವಿ
ಮತ್ತು ಕವಿತೆಯ ನಡುವೆ
ಚೂರು ಪದ ಹೆಚ್ಚುಕಮ್ಮಿಯಾದವು
ಮುನಿಸಿಕೊಂಡು ಮೂವತ್ತಾರಾದವು
ಇರ್ವರೂ
ವಿಪರಿತ ಸ್ವಾಭಿಮಾನಿಗಳು
ಹಟದ ಅಖಾಡಕ್ಕೆ ಇಳಿದೇ ಬಿಟ್ಟವು
ಬಗ್ಗಿ ಬದುಕುವುದು ಇಬ್ಬರಿಗೂ ಒಗ್ಗದು
ಕವಿಯ
ಬಗ್ಗಿಸಬೇಕೆಂದು ಕವಿತೆ
ಬಗ್ಗದೇ ಒಗ್ಗಿಸಿಕೊಳ್ಳಬೇಕೆಂದು ಕವಿ
ಇಬ್ಬರೂ ಒಬ್ಬರ ಮಾತೂ ಕೇಳದವರೆ
ಕವಿ
ಸೋತು ಮಲಗಿದ
ಕವಿತೆ ಮೆಲ್ಲಗೆ ಕನಸಿಗಿಳಿಯಿತು
ಬೆಳ್ಳಬೆಳಿಗ್ಗೆ ‘ಅರವತ್ಮೂರು’ ಕವಿತೆ ಬರೆದ.
-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ
*****