ಕವಿತೆಯೊಡನೆ…
ಕವಿತೆಯೊಡನೆ
ಸದಾ ನನ್ನದೂ ಕಾದಾಟ
ನೀನು ಯಾವಾಗಲೂ
ದಿನ ತುಂಬಿ ಬರುವದಿಲ್ಲವೆಂದು..
ಕವಿತೆಗೋ ನನ್ನೊಡನೆ ತಂಟೆ
ನೀನು ಅನುಭವಿಸಿ
ಹೆರುವುದೆ ಇಲ್ಲವೆಂದು
ಹೀಗಾಗಿ ನನ್ನ ಕವಿತೆ ಕೌರವ ಗಣ
ಕೆಲವು ಅರೆಬರೆ ಬೆಂದವು
ಕೆಲವು ಅವಸರದಲಿ ಬಂದವು
ಹೌದೇ ಕವಿತೆ ಹೆರುವದಕ್ಕೆ
ಕಾಲವಿದೆಯೇ?
ಮಗುವ ಹೆರುವದಕ್ಕಿದ್ದಂತೆ!
ಯಾರೋ ದೂರದಲ್ಲಿ
ಸಣ್ಣಗೆ ಹೌದೆಂಬ ಭಾವ
ನನ್ನದೊ ತಕರಾರು..
ಅದ್ಹೇಗೆ ಕವಿತೆಯದು
ತಾಯಿಯ ಪ್ರಸವ..
ಅವಳಂತೆ ನೋವು
ತಿನ್ನುವ ತಾಳ್ಮೆ
ಕಾಯುವ ಜಾಣ್ಮೆ
ನನ್ನ ಕವಿತೆಗಿದೆಯೆ?
ಖಂಡಿತದಿ ಇಲ್ಲ!
ಇನ್ಯಾರೋ ಹೇಳಿದರು
ಕವಿತೆ ಎಂದರೆ
ಆಗಸದಿ ಮಳೆಯ ಮೋಡ
ಹನಿಯ ಕಟ್ಟಿದಂತೆ
ಗಿಡದೊಳಹಿನ ಕುಡಿ
ಕಾಯಾಗಿ ಫಲಿತಂತೆ…
ಅರೇ ಕವಿತೆಯಂದರೆ
ಇಷ್ಟು ಕಷ್ಟವೇ!
ನನ್ನಿಂದ ಖಂಡಿತದಿ
ಸಾಧ್ಯವಿಲ್ಲ
ಅಷ್ಟಕ್ಕೂ ಕವಿತೆ ಯಾವಾಗ
ಮಳೆಯಾಗಿ ಹನಿದಿದೆ?
ಗಿಡದಿ ಹಣ್ಣಾಗಿ
ತಣಿಸಿದೆ?
ಹೀಗಾಗಿ
ನನ್ನ ಕವಿತೆ…
ಸದಾ ಅಪೂರ್ಣ..
ಪೂರ್ಣತೆಯ
ದಾರಿಯಲಿ ಹೊರಟ
ಸಣ್ಣ ಮಣ್ಣ ಕಣ…
-ವೈ ಎಂ.ಯಾಕೊಳ್ಳಿ, ಸವದತ್ತಿ