ಬಾಬಾ ಸಾಹೇಬರ ನೆನಪಿನೊಂದಿಗೆ………
ಕಂಗಳ ಸೂರ್ಯ
ಅದೆಷ್ಟೋ ಶತಮಾನಗಳಿಂದ
ಆಗಸವನ್ನೇ ನೋಡದೆ
ನಡೆಯುತ್ತಿದ್ದರವರು
ತಮ್ಮತನವನೆಲ್ಲ
ಯಾರದೋ ಪಾದಗಳ ಧೂಳಾಗಿಸಿ
ಕಂಬನಿಗಳ ಕಡಲನ್ನೇ
ಬಾಯಾರಿಕೆಯ ತಣಿವನ್ನಾಗಿಸಿ
ನಡೆಯುತ್ತಲೇ ಇದ್ದರು
ಸೂರ್ಯ ಚಂದಿರರನ್ನೂ ನೋಡದಂತೆ
ತಮ್ಮ ಮುಖಗಳು ತಮಗೇ ತಿಳಿಯದಂತೆ
ಅದೆಷ್ಟು ನೋವುಗಳು
ಯಾತನೆಗಳು ಅಹಂಗಳ ಪಾದಗಳಡಿಯಲಿ ಹುದುಗಿ
ನರಳಿದವೋ, ನಿಡುಸುಯ್ದವೋ
ಒಂದನ್ನೊಂದು ತಬ್ಬಿ ಗೋಳಿಟ್ಟವೋ
ಥಟ್ಟನೆ……………
ಕಂಬನಿಗಳೊಳಗಿನ ಕಾರ್ಮುಗಿಲ ಮಿಂಚಾಗಿ
ನೆಲದೊಡಲ ನೋವುಗಳ ಹೊತ್ತ
ಮೊಳಕೆಯ ಚಿಗುರಾಗಿ
ನಿಟ್ಟುಸಿರುಗಳ ಕಂಠದ
ಮಹಾದನಿಯಾಗಿ
ಬಾಬಾ ನೀವು ಮೂಡಿಬಂದಿರಿ
ಶತ ಶತಮಾನಗಳ ಅಳಲಿನ ಭಾರವ ಹೊತ್ತವರ
ಮೂಟೆಗಳನಿಳಿಸಿ ದಾರಿ ತೋರಿದಿರಿ
ದಲಿತರ ಕಂಗಳಲಿ ಸೂರ್ಯನಾಗಿ
ಉದಯಿಸಿದಿರಿ
ತಗ್ಗಿದ ತಲೆಯೆತ್ತಿ
ತಮ್ಮ ಸ್ವಾಭಿಮಾನದ ಮುಖಗಳ ಅರಿಯುತ್ತಾ
ಸಮಾನತೆಯ ಹೆಜ್ಜೆಗಳನೂರುವಂತೆ ಮಾಡಿದಿರಿ
ಕಪ್ಪುನೆಲದ ಮೇಲೀಗ
ಬೆಳಕಿನ ಹೆಜ್ಜೆಗಳು
ಕಂಬನಿಗಳ ಕಣ್ಣುಗಳಲ್ಲೀಗ
ಸಮತೆಯ ಕಿರಣಗಳು
ಸಂಬಳಿಗೋಲಿನ ಕೈಗಳಲ್ಲೀಗ
ಹೊತ್ತಗೆಗಳು
ಬಾಗಿದ್ದ ಎದೆಯಲೀಗ
ಆತ್ಮಾಭಿಮಾನದ
ನೇರ ಸ್ತಂಭಗಳು
ಊರುವ ಪ್ರತಿ ಹೆಜ್ಜೆಯಲೂ
ದೃಢತೆಯ ಗುರುತುಗಳು
ಬಾಬಾ
ನಮ್ಮೆಲ್ಲರ ನಡೆನುಡಿಗಳಿಗೊಂದು
ಅರ್ಥ ಕಲ್ಪಿಸಿದಿರಿ
ತಿದ್ದಿ ತೀಡಿದಿರಿ
ಮಾನವತಾವಾದಕ್ಕೇ ಒಂದು
ಮುನ್ನುಡಿ ಬರೆದಿರಿ
ದಮನಿತರ ಬೆನ್ನೆಲುಬಾದಿರಿ
ಮನುಜಪಥಕ್ಕೊಂದು
ಹೊಸ ಭಾಷ್ಯ ಬರೆದಿರಿ
-ಸಿದ್ಧರಾಮ ಕೂಡ್ಲಿಗಿ
—–
[ಸಂಬಳಿಗೋಲು : ಹಿಂದಿನ ಕಾಲದಲ್ಲಿ ದಲಿತರು ಊರೊಳಕ್ಕೆ ಪ್ರವೇಶಿಸುವಾಗ ಕೋಲಿಗೆ ಗೆಜ್ಜೆಕಟ್ಟಿಕೊಂಡು ಅದರ ಸದ್ದು ಮಾಡುತ್ತ ಬರಬೇಕಿತ್ತು. ಇದು ಮೇಲ್ಜಾತಿಯವರು ಮೈಲಿಗೆಯಾಗಬಾರದೆಂದು ದೂರ ನಿಲ್ಲಲು ಗುರುತಿಸಲೆಂದೇ ಈ ವ್ಯವಸ್ಥೆ ಮಾಡಲಾಗಿತ್ತು.]
—–