ಅನುದಿನ ಕವನ-೧೦೭೭, ಕವಿ:ಮಹಾದೇವ ಎಸ್.ಪಾಟೀಲ ರಾಯಚೂರು, ಕಾವ್ಯ ಪ್ರಕಾರ:ತರಹಿ ಗಜಲ್

ತರಹಿ ಗಜಲ್

ಕಡಕೊಟ್ಟ ಕನಸುಗಳಾದರೂ ಬಿಟ್ಟುಹೋಗು ಕಾಪಿಡುವೆ
ಬಾಡಿದ ಒಲವಿನ ಹೂಗಳಾದರೂ ಬಿಟ್ಟುಹೋಗು ಕಾಪಿಡುವೆ

ಸವಿಗನಸು ತುಂಬಿದ ಮಧುಬಟ್ಟಲು ಖಾಲಿಯಾಗಿದೆ ಸಾಕಿ
ಮೌನದ ಪಿಸುಮಾತುಗಳಾದರೂ ಬಿಟ್ಟುಹೋಗು ಕಾಪಿಡುವೆ

ಎದೆಯ ತೋಟದಲಿ ಮೋಹದ ಬೀಜವ ಬಿತ್ತಿ ಬೆಳೆದವಳು
ಪ್ರೇಮದ ಪರಾಗಸ್ಪರ್ಶವಾದರೂ ಬಿಟ್ಟುಹೋಗು ಕಾಪಿಡುವೆ

ಬಿಡದೆ ಕಾಡುವ ನೂರೆಂಟು ನೆನಪುಗಳಲಿ ಕವಿತೆ ಗಿಚುತಿರುವೆ
ಮೊಗದ ಸಿರಿಯ ಸೊಬಗಾದರೂ ಬಿಟ್ಟುಹೋಗು ಕಾಪಿಡುವೆ

ಪ್ರೀತಿಯನ್ನು ಮುತ್ತು ರತ್ನಗಳಂತೆ ಅಳೆದು ತೂಗಿದವಳು ನೀನು
ಅನುರಾಗದ ತವನಿಧಿಯಾದರೂ ಬಿಟ್ಟುಹೋಗು ಕಾಪಿಡುವೆ

ಸಂತನಾಗಿ ಸಂತೆಯಲಿ‌ ನೆನೆ ನೆನೆದು ವಿರಹಗೀತೆಯ ಹಾಡುತಿರುವೆ
ಅಗಣಿತ ಮಧುರ ನೆನಪುಗಳಾದರೂ ಬಿಟ್ಟುಹೋಗು ಕಾಪಿಡುವೆ

ವಿದಾಯದ ಕಂಬನಿಯಲಿ ತೇಲಿ ಹೋದವನು ಮಹಾದೇವ
ನಿನ್ನ ಬೆಚ್ಚನೆಯ ಅಪ್ಪುಗೆಯಾದರೂ ಬಿಟ್ಟುಹೋಗು ಕಾಪಿಡುವೆ.

(ತರಹಿ: ಡಾ.ಶಿವಕುಮಾರ ದಂಡಿನ ಅವರ ಕಾವ್ಯದ ಸಾಲು;
ಕಡಕೊಟ್ಟ ಕನಸುಗಳಾದರೂ ಬಿಟ್ಟುಹೋಗು ಕಾಪಿಡುವೆ)


-ಮಹಾದೇವ ಎಸ್.ಪಾಟೀಲ
ರಾಯಚೂರು.
*****