ಪಾರ್ಶ್ವಗಳ ಎಣಿಕೆ
ಮುಖದ ಗಂಟು ಬಿಗಿದು ಸಡಿಲಿಸಿ
ಅತ್ತ ಇತ್ತೊಮ್ಮೆಓರೆನೋಟ ಬೀರುತ್ತ
ಕೈಬೆರಳು ಮಡಿಚಿ ಬಿಚ್ಚುತ್ತ ತಲೆ ಕೆರೆದು
ಯಾವ ಪರಿವೆ ಇಲ್ಲದಂತೆ ಕುಳಿತು ಎದ್ದು
ಗೂಢ ಲೆಕ್ಕಾಚಾರದಿ ಮುಳುಗಿತ್ತು ಮನವೊಮ್ಮೆ
ಕಣ್ಣು ಕಿರಿದು ಮಾಡಿ ನೋಡ್ತಿತ್ತು ಬುದ್ಧಿ
ಅಗಣಿತ ಗಣಿತದ ಕೂಡಿ ಕಳೆವ ಆಟವ
ಕೇಳಿಯೇ ಬಿಟ್ತು ಏನು ಗೊಂದಲವೀ ಪರಿ
ಎಣಿಸುತಿಹೆ ಬದುಕಿಗೆ ಪಾರ್ಶ್ವಗಳೆಷ್ಟೆಂದು
ಹೇಳಿತಾ ಮನ ಬಲೆ ಹೆಮ್ಮೆಯ ದೊಡ್ಡ ನಗುಬೀರಿ
ದೊಡ್ಡ ದಡ್ಡ ನೀ ಸಿಕ್ಕೀತಾ ಲೆಕ್ಕವೆಂದ ಬುದ್ಧಿ
ಕೇಳು ಜನಮೇಜಯ ಅಂತ ಶುರು ಮಾಡ್ತು
ನಗುವ ಸಂಭಾಳಿಸಿ ಅಳುವಿನ ಮೈ ನೇವರಿಸಿ
ಅಳು ನಗುವು ಸಂಧಿಸಿ ರಾಜಿಯಾದ ಗಳಿಗೆ
ಸಾಧಿಸಬೆಕಿದೆ ಮೌನ ಇಲ್ಲ ಅಲ್ಲಿ ಕೆಲಸವೆಂದು ತಿಳಿದುಕೋ
ಗುಣಿಸಿ ನೋಡಿ ಎಷ್ಟುಂಟು ಅಲ್ಲಿ ತಾವೆಂದು
ಎಣಿಸಿ ಹೆಜ್ಜೆ ಹಾಕಿ ಗುರುತು ಬಿಡದಂತೆ ಸಾಗಿ
ಬಿದ್ದ ಗುಂಡಿಗೆ ಜೋಡಿಸಿ ಚೆಂದ ತ್ಯಾಪೆಯೊಂದ
ಹುದಲಲಿ ಸಿಲುಕದಂತೆ ಕಿತ್ತಿಟ್ಟು ಪಾದ ನಡೆದರೂ
ಮೆತ್ತಿದ ಕಸರು ಕಾಣದಂತೆ ಮರೆಮಾಡಬೇಕಿದೆ ತಿಳಿದುಕೋ
ನೋಡು ಮುಖದ ನೆರಿಗೆ ಕಾಂಬ ನೂರು ಹಳ್ಳ
ಬಳಿದು ಸುಣ್ಣ ಬಣ್ಣ ಮರೆವಿನ ದಪ್ಪ ತೆರೆ ಹಾಕಿ
ಅಲ್ಲಿ ಬಿಟ್ಟು ತಗ್ಗು ದಿನ್ನೆ ಗೊತ್ತಾಗದಂತೆ ಮುನ್ನೋಡಿ
ಇಂದಿನ ಪಾತ್ರವೊಂದರ ಅಣುಕುವಾಟ ನಡೆಸಿ
ಬಲು ಗಂಭೀರ ಖಂಬೀರತೆಯ ತೋರಬೇಕಿದೆ ತಿಳಿದುಕೋ
ಇಷ್ಟಗಲ ಬಾಯ್ದೆರೆದು ಆಕಳಿಸಿ ಮನ ಹೊರಳೆ
ಗಹಗಹಿಸಿ ಬುದ್ಧಿ ಪೆದ್ದೆ ಎಣಿಕೆ ನಡೆದಿದೆ ತಾಳು
ಅದೇನು ಮಹಾ ,ಸರಳ ಕೆಲಸ, ಇಲ್ಲ ಅಂದಾಜಷ್ಟೆ
ಅಂತವಿಲ್ಲದ ಸಂಖ್ಯೆಗಳ ಜಾತ್ರೆಯಲಿ ಕಣ್ಕಟ್ಟಿನಾಟ
ಬದುಕಿನ ಪಾರ್ಶ್ವದ ಎಣಿಕೆ ತಳವಿಲ್ಲದ ಮರೀಚಿಕೆ
ಬಿರಿದೀತು ಎದೆ ತಿಳಿದುಕೋ, ಹೇಳಿ ಗಕ್ಕನೆ ಮೌನವಾಯ್ತು ಬುದ್ಧಿ ಬುದ್ಧನಂತೆ
-ಸರೋಜಿನಿ ಪಡಸಲಗಿ, ಬೆಂಗಳೂರು