ಅನುದಿನ ಕವನ-೧೦೮೨, ಕವಿ: ಟಿಪಿ ಉಮೇಶ್, ಹೊಳಲ್ಕೆರೆ

ಹೂಗಳ ರಾಶಿಯಾದರೆ;
ಪೋಣಿಸುವ ದಾರವಾಗುವೆ!
ಹರಿಯುವ ಜಲವಾದರೆ;
ಗುರಿ ಸೇರಿಸುವ ತೀರವಾಗುವೆ!
ಬೀಸುವ ವಾಯುವಾದರೆ;
ಮೈಮರೆತು ಪುಳಕಗೊಳ್ಳುವೆ!
ಮಣ್ಣಿನ ಕಣಗಳಾದರೆ;
ಚಿಗುರಾಗುತ ಉಸಿರಾಗುವೆ!
ಬೆಳಕಿನ ಪುಂಜವಾದರೆ;
ಪ್ರಕಾಶಿಸುವ ತರಂಗವಾಗುವೆ!
ಹಕ್ಕಿಗಳ ಧ್ವನಿಯಾದರೆ;
ಸ್ವರಸಂಗೀತದಿ ಝೇಂಕರಿಸುವೆ!
ಗಗನದಿ ಬಣ್ಣಗಳಾದರೆ;
ಕಾಮನಬಿಲ್ಲಿನಲಿ ರಂಗೇರುವೆ!
ಕವಿತೆಯಲ್ಲಿ ಲೀನವಾದರೆ;
ಪದಪದಗಳಲ್ಲಿ ಅರ್ಥವಾಗುವೆ!
ಸುದೈವ ದೇವತೆಯಾದರೆ;
ಕುಣಿಯುತ ಹೊತ್ತು ಮೆರೆಸುವೆ!
ನೀನಿಲ್ಲಿ ನಾನಾದರೆ;
ನಾನೆಂದು ನೀನಾಗಿರುವೆ!


-ಟಿಪಿ ಉಮೇಶ್, ಹೊಳಲ್ಕೆರೆ
—–