ಬಳ್ಳಾರಿ, ಡಿ.23:ವಿದ್ಯಾರ್ಥಿಗಳ ಸಾಧನೆ, ಯಶಸ್ಸಿನಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಾನಪದ ಹಿರಿಯ ಕಲಾವಿದೆ, ಪದ್ಮಶ್ರೀ ಡಾ. ಮಂಜಮ್ಮ ಜೋಗತಿ ಹೇಳಿದರು.
ನಗರದ ಶ್ರೀ ಸತ್ಯಂ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯವು ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಬಿ.ಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಅನನ್ಯ ಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಶಿಕ್ಷಣದ ಜತೆ ಕಲೆ ಸಾಹಿತ್ಯ ಸಂಸ್ಕೃತಿ ಜಾನಪದ ಕಲೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ವಿಶಿಷ್ಟವಾದ ಶಿಕ್ಷಣವನ್ನು ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಕುಮಾರ್ ಅವರು ತಮ್ಮ ಸಂಸ್ಥೆ ಕಳೆದ ಹದಿನೆಂಟು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಶಿಕ್ಷಕರಾಗಿ ರೂಪಿಸಿದೆ. ಜತೆಗೆ ಬೇರೆ ಉದ್ಯೋಗಗಳಲ್ಲಿ ತಮ್ಮ ಬದುಕನ್ನು ಕಂಡು ಕೊಂಡಿದ್ದಾರೆ ಎಂದರು.
ಸಂಸ್ಥೆಯು ನುರಿತ ಬೋಧಕ ಸಿಬ್ಬಂದಿ ವರ್ಗವು ಹೊಂದಿದ್ದು ಶೇಕಡಾ ನೂರರಷ್ಟು ಫಲಿತಾಂಶ ಪಡೆದ ಹೆಮ್ಮೆ ಇದೆ. ಕಲೆ ಸಾಹಿತ್ಯ ಸಂಸ್ಕೃತಿ ಸಂಬಂಧಿಸಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಕೂಡ ಸಂಘಟಿಸಿದೆ ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಂಜಮ್ಮ ಜೋಗತಿಯವರ ಸಾಧನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಲಿ ಎನ್ನುವ ಕಾರಣದಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ , ವೃತ್ತಿಯಲ್ಲಿ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಪ್ರಶಾಂತ್ ಕುಮಾರ್ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಅಶ್ವ ರಾಮು ಅವರು ಮಾತನಾಡಿ ಮಂಜುನಾಥ ನಿಂದ ಮಂಜಮ್ಮಳಾಗಿ ಅನೇಕ ಅವಮಾನ ಅಪಮಾನಗಳನ್ನು ಸಹಿಸಿಕೊಂಡು ಯಾವ ಸಮಾಜ ಅವರನ್ನು ತಿರಸ್ಕರಿಸಿದರೋ ಅದೇ ಸಮಾಜದಿಂದ ಪುರಸ್ಕಾರ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ ಮಾತೆ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ನಮಗೆಲ್ಲ ಆದರ್ಶರಾಗಿದ್ದಾರೆ ಎಂದರು.
ಇವರ ಜೀವನ, ಹೋರಾಟ ಎಂಟು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿರುವುದು ದಾಖಲೆಯ ವಿಶೇಷ ಎಂದರು.
ಶಿಕ್ಷಣ ವೆಂದರೆ ಕೇವಲ ಓದು ಬರಹ ಮಾತ್ರವಲ್ಲ, ವರ್ತನೆ, ನಡವಳಿಕೆ, ಬದುಕುವ ಕಲೆ, ಕೌಶಲಗಳನ್ನು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ: ಇದೇ ಸಂದರ್ಭದಲ್ಲಿ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಆರ್ ಜಗದೀಶ್ ಕುಮಾರ್ ಅವರು ಪದ್ಮಶ್ರೀ ಡಾ ಮಾತ ಮಂಜಮ್ಮ ಜೋಗತಿ ಅವರ ಕಲಾ ಸೇವೆಯನ್ನು ಪರಿಗಣಿಸಿ ಅನನ್ಯ ಸಾಧಕಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಎಂ ವಿ ಜಯದೇವಯ್ಯ, ಆಲಂಭಾಷ, ನಾಗೇಶ್ ಬಾಬು, ಆರ್ ಚಂದ್ರಶೇಖರ್, ಶ್ರೀಕಾಂತ ಮುನಿ ಎನ್, ರೆಡ್ಡಿ ಹಳ್ಳಿ ಗಿರಿಜಾ, ಅಶ್ವಿನಿ, ಅನುಷಾ, ಬೋಧಕೇತರ ಸಿಬ್ಬಂದಿಯವರಾದ ಕೆ.ನೀಲಕಂಠ, ಚಂದ್ರಶೇಖರ ನಾಯ್ಡು, ಸುಲೋಚನಾ ಜೆ, ಚಂದ್ರಶೇಖರ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಆಲಂಭಾಷ ಸ್ವಾಗತಿಸಿದರು. ವಂದನಾರ್ಪಣೆಯನ್ನು ಮಾನಪ್ಪ ವಂದಿಸಿದರು.ಸಂತೋಷ್ ಕುಮಾರ್ , ಫೈರೋಜಾ ನಿರೂಪಿಸಿದರು.
ನಂತರ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿದವು.
——