ಅನುದಿನ‌ ಕವನ-೧೦೮೭, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ, ಕವನದ ಶೀರ್ಷಿಕೆ: ಕಾಯಕ ಸಂತ-ರೈತ

ಕಾಯಕ ಸಂತ- ರೈತ

ನಿತ್ಯವು ದುಡಿಯುತ ಕಾಯವ ದಣಿಸಿ
ಬೆವರಲಿ ಭಕ್ತಿಯ ಮಳೆಯ ಸುರಿಸಿ
ರಟ್ಟೆಯ‌ ಶಕ್ತಿಯ ಧರಣಿಗೆ ಸವೆಸಿ
ಮೇಘನ ನಂಬಿ ಬೀಜವ ಹಾಕಿಸಿ

ಬಿಸಿಲು ಮಳೆಗೆ ದೇಹವ ದಂಡಿಸಿ
ಚಳಿಗಾಳಿಗೆ ಬೆದರದೆ ಮೈಯನು ತಾಗಿಸಿ
ಚಿಗುರಿದ ಸಸಿಯ ಜತನವ ಮಾಡುತ
ನಿಯತ್ತಲಿ ದುಡಿದು ಬೆಳೆಯನು ಪಡೆಯುತ

ಧರಣಿಯ ಜನರಿಗೆ ಅನ್ನವ ಹಂಚುತ
ಬೆವರಿನ ಶಕ್ತಿಯ ಜಗಕೆ ಪಸರಿಸುತ
ಅನ್ನುವ ಬೆಳೆದು ದೈವಕೆ ನಮಿಸುತ
ಅವಿರತ ದುಡಿಯುವ ಕರ್ಮಯೋಗಿ ರೈತ

ಹೊಟ್ಟೆಕಿಚ್ಚಿನ ಸೋಂಕು ತಾಕದ
ದ್ವೇಷ ಅಸೂಯೆಯ ಗಾಳಿಯು ಬೀಸದ
ಜಗತ್ತಿನ ಆರ್ಥಿಕತೆಯ ಅಭಿವೃದ್ದಿಯ ಧೀಮಂತ
ಹಂಚಿತಿನ್ನುವ ಮಾನವೀಯತೆಯ ಮಾದರಿ ಸಂತ

✍️ಕಾಡಜ್ಜಿ ಮಂಜುನಾಥ, ಕಮಲಾಪುರ