ರಂಗತೋರಣ ನಾಟಕೋತ್ಸವಕ್ಕೆ ಎಸ್.ಮಲ್ಲನಗೌಡ ಚಾಲನೆ

ಬಳ್ಳಾರಿ, ಡಿ.24: ನಗರದ ವಾಜಪೇಯಿ ಬಡಾವಣೆಯಲ್ಲಿರುವ ರಂಗತೋರಣ ರಂಗಮಂದಿರದಲ್ಲಿ ಶನಿವಾರ ಸಂಜೆ  ಮೂರು ದಿನಗಳ ನಾಟಕೋತ್ಸವಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಮಲ್ಲನಗೌಡ ಅವರು ಚಾಲನೆ ನೀಡಿದರು.
ವೈಕುಂಠ ಏಕಾದಶಿ ದಿನದಂದು ರಂಗತೋರಣದಲ್ಲಿ ನಾಟಕ ಪ್ರದರ್ಶನ ಪ್ರಾರಂಭ ಆಗುತ್ತಿರುವುದು ಸಂತಸ ತಂದಿದೆ, ಜನರು ನಾಟಕದ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಹೇಳಿದರು.
ಹಿರಿಯ ಇಂಜಿನಿಯರ್ ಕೆ ಬಿ ಸಂಜೀವ್ ಪ್ರಸಾದ ಅವರು ಮಾತನಾಡಿ,  ಪ್ರಭುದೇವ ಕಪ್ಪಗಲ್ಲು ಅವರು ನಾಟಕದ ಗೀಳಿನಿಂದ ನಾಟಕದ ಮೂಲಕವೇ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಮಟ್ಟದ ಕಲಾವಿದರಿಂದ ನಗರದಲ್ಲಿ ನಾಟಕೋತ್ಸವ ಆಯೋಜಿಸಿ ಗಮನ ಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಜಪಾಯಿ ಬಡಾವಣೆ ಮುಖಂಡ ಭೀಮೇಶಸ್ವಾಮಿ ಮಾತನಾಡಿ, ಸಿನಿಮಾ ನಟನೆ ಸುಲಭ ತಪ್ಪಾದರೆ ಮತ್ತೆ ನಟಿಸಬಹುದು ಆದರೆ ನಾಟಕದಲ್ಲಿ ಒಂದೇ ಟೇಕ್ ಹಾಗೂ ಸಹಜ ನಟನೆಯಿಂದ ಕೂಡಿರುತ್ತದೆ.ಈ ಅನುಭವ  ನೀಡುವ ಸಂತಸವೇ ಬೇರೆ ಎಂದು ತಿಳಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು
ರಂಗತೋರಣ ಸಂಸ್ಥೆ 2004 ರಲ್ಲಿ ವಿಧ್ಯಾರ್ಥಿ ನಾಟಕೋತ್ಸವ ನಡೆಸುವ ಮೂಲಕ ಆರಂಭಗೊಂಡು 2010 ರಲ್ಲಿ ನೊಂದಣಿಗೊಂಡಿತು.  ಅನೇಕ ನಾಟಕೋತ್ಸವಗಳ ಜತೆ  ಪ್ರತಿ ವರ್ಷ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ನಗರದ ಕಲಾಭಿಮಾನಿ ಪ್ರೇಕ್ಷಕರು ಮೂರು ದಿನಗಳ ನಾಟಕ ವೀಕ್ಷೀಸಿ ರಂಗ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.   ಅಡವಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಧಾತ್ರಿ ರಂಗಸಂಸ್ಥೆಯ “ಸೋರುತಿಹುದು ಸಂಬಂಧಗಳು”ನಾಟಕ ಪ್ರದರ್ಶನ ನಡೆಯಿತು.. ಹಿರಿಯ ನಾಗರಿಕರು, ಸೇನೆಯಲ್ಲಿ  ಸೇವೆ ಮಾಡುವ ಕನಸಿನ ಯುವಕ ,ವಿಧವೆ, ಬೆಣ್ಣೆ ಸಾಬ್, ಕಲಾವಿದ ,ಇವರೆಲ್ಲ ಪಿಂಚಣಿಗಾಗಿ ಕಾಯುತ್ತ ತಮ್ಮ ಬದುಕಿನ ವೃತ್ತಾಂತವನ್ನು ಹೇಳುತ್ತಾ ,ಇಂದಿನ ದಿನಗಳಲ್ಲಿ ಆಸ್ತಿ ಮಾಡಿದರೂ ಜೀವನದ ಕೊನೆಯ ದಿನಗಳಲ್ಲಿ ಮಕ್ಕಳಿಂದ ಸೂಕ್ತ ಆಶ್ರಯ ಸಿಗದೇ ತಮಗಾದ ನೋವನ್ನು ವ್ಯಕ್ತಪಡಿಸುತ್ತಾ ಆಸ್ತಿ ಹಂಚಿಕೆಗೆ ಹಂಬಲಿಸುವ ಮಕ್ಕಳು ಪ್ರತಿ ಹಂಚಿಕೆ ಎಂಬುದೇ ಗೊತ್ತಿಲ್ಲದವರಂತಾಗಿದ್ದಾರೆ. ಎಂಬ ಮಾತು ಭಾವನಾತ್ಮಕವಾಗಿ ಪ್ರೇಕ್ಷಕರ ಮನ ಕಲುಕುತ್ತದೆ. ಹಳೆಯ ಸಿನಿಮಾಗಳ ಹಾಡುಗಳನ್ನು ಕಥೆಯ ಸಂದರ್ಭದಲ್ಲಿ ತಕ್ಕಂತೆ ಬಳಸಿಕೊಂಡು ಇಂದಿನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಮ್ ವಿಷಯವನ್ನು ತೆಗೆದುಕೊಂಡು ಕಲಾವಿದರು ಪ್ರಸ್ತುತಪಡಿಸಿದ್ದು ಗಮನ ಸೆಳೆಯಿತು.
*****