ತರಹೀ ಗಜಲ್
ಮಿಸ್ರಾ : ಡಾ.ಅರವಿಂದ ಪಟೇಲ್
( ಕನಸುಗಳ ಹೊರೆಯ ಹೊತ್ತು )
ಕನಸುಗಳ ಹೊರೆಯ ಹೊತ್ತು ತಂದಿರುವೆ ತುಸು ಇಳಿಸಿಕೊಳ್ಳಿರಿ
ದುಗುಡದ ಹಾಡೊಂದು ತೇಲಿ ಬರುತಿದೆ ತುಸು ಕೇಳಿಸಿಕೊಳ್ಳಿರಿ .
ಮಳೆಯಲಿ ಮಲ್ಲಿಗೆ ಚೆಲ್ಲುವ ಕಂಪನು ತುಸು ಉಳಿಸಿಕೊಳ್ಳಿರಿ
ಹಸಿವೆಯ ಚಿತೆಯಲಿ ನರಳುವ ಜೀವವ ತುಸು ಬಿಡಿಸಿಕೊಳ್ಳಿರಿ.
ಕಸದ ತೊಟ್ಟಿಯಲೂ ಅನಾಥ ಅಳು ತುಸು ಆಲಿಸಿಕೊಳ್ಳಿರಿ
ಮಾರಲಿಟ್ಟ ನವಿಲುಗರಿಯ ಇಳಿವ ಕಂಬನಿಯ ತುಸು ನಿಲ್ಲಿಸಿಕೊಳ್ಳಿರಿ .
ನೊಂದ ಆತ್ಮ ನೋವಿನಲಿ ಬೇಯುತಿದೆ ತುಸು ಉರಿಸಿಕೊಳ್ಳಿ
ಅಂಬಿಗನ ಮೋಸಕೆ ನಾವೆ ಮುಳುಗುತಿದೆ ತುಸು
ದಾಟಿಸಿಕೊಳ್ಳಿ .
ಶ್ರಾವಣದ ಸಂಜೆಯೂ ಕಾದ ಬಂಡೆಯಾಗಿದೆ ತುಸು ಮುಟ್ಟಿಸಿಕೊಳ್ಳಿ
ಬೆಳಕು ಹೆಜ್ಜೆ ಇಟ್ಟು ಕರೆಯುತಿದೆ ತುಸು ತಾಕಿಸಿಕೊಳ್ಳಿ
-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
[ಚಿತ್ರಕೃಪೆ: ಅಬ್ದುಲ್ ರಷೀದ್, ಹಿರಿಯ ಸಾಹಿತಿ, ಮೈಸೂರು]
*****