ಸಾವಿರದ ಸಾವಿತ್ರಿಬಾಯಿ
ಮಹಾರಾಷ್ಟ್ರದ ಮಗಳಾಗಿ ಜನಿಸಿದೆ
ಜ್ಯೋತಿ ಬಾ ಪುಲೆಗೆ ಮಡದಿಯಾದೆ
ಮಹಿಳೆಯರಿಗೆ ಮಾತೆಯಾಗಿ ಬೆಳೆದೆ
ಶಿಕ್ಷಣದ ಬೆಳಕನೀವ ಗುರುಮಾತೆಯಾದೆ
ಕರುಬಿದವು ಕುಲಗೇಡಿಗಳು ನಿನ್ನ ಉನ್ನತಿಗೆ
ಸಗಣಿಯ ಎರಚಿದರು ನೀಚರು ನಿನ್ನ ಪ್ರಗತಿಗೆ
ಅಳುಕದೆ ಅಂಜದೆ ಮುನ್ನೆಡದೆ ನಿನ್ನ ಗುರಿಯೆಡೆಗೆ
ನಿನ್ನ ಚಿತ್ತ ಸದಾ ಮಹಿಳೆಯರ ಉದ್ಧಾರದೆಡೆಗೆ
ಶಾಲಾಗಳ ನಿರ್ಮಿಸಿದೆ, ಬಾಲಕಿಯರ ಓದಿಸಿದೆ
ದಮನಿತರ ಧಮನಿಗಳಲಿ ಧೈರ್ಯ ತುಂಬಿದೆ
ಅನಾಥ ಶಿಶುಗಳನು ಹೆತ್ತ ಮಕ್ಕಳಂತೆ ಸಲುಹಿದೆ
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಹೆಸರಾದೆ.
ಜಾತಿಯ ಜಾಡ್ಯವ ಝಾಡಿಸಿ ನೀತಿಯ ನೀರೆರದೆ
ದಲಿತರ ಅಂಗಳದಿ ಅಕ್ಷರದ ರಂಗೋಲಿ ಬರೆದೆ
ಜ್ಞಾನ ದೀವಿಗೆ ಬೆಳಗಿ ಸಮತೆಯ ಪ್ರಸಾದ ಹಂಚಿದೆ
ಅಕ್ಷರದ ಅವ್ವ ನೀನಾಗಿ ಅಕ್ಕರದಿ ಜಗವ ಬೆಳಗಿದೆ
ಕಲಿಸಿ ಗುರುವಾದೆ,ಬರೆದು ಕವಿಯಾದೆ
ಮಿತ್ಯ ಅಳಿಸಿ ಸತ್ಯ ಶೋಧಕಿ ನೀನಾದೆ
ಅನ್ಯಾಯ ಪ್ರತಿಭಟಿಸಿ ಕ್ರಾಂತಿ ಕಿಡಿ ನೀನಾದೆ
ಸಾವಿರದ ಸಾವಿತ್ರಿಯಾಗಿ ಜನ ಮನದಿ ಉಳಿದೆ
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.