ಅನುದಿನ ಕವನ-೧೦೯೯, ಹಿರಿಯ ಕವಿ: ಡಾ. ಸಿ.ಎಸ್.ದ್ವಾರಕಾನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಅವ್ವ..ನನ್ನವ್ವ

ಅವ್ವ.. ನನ್ನವ್ವ
ಸಾವಿತ್ರಿಬಾ ಪುಲೆಯವ್ವ..
ಅವ್ವ ಅಕ್ಷರದವ್ವ
ಸಾವಿತ್ರಿಬಾ ಪುಲೆಯವ್ವ…

ಬಂಡೆಯ ಮೇಲೂ ಅಕ್ಷರವ ಬಿತ್ತಿದೆ
ಬರಡು ಭೂಮಿಯಲ್ಲೂ ಅರಿವು ಚಿಗುರಿಸಿದೆ.
ಕತ್ತಲು ತುಂಬಿದ ಕಣ್ಣುಗಳಲ್ಲಿ ನಕ್ಷತ್ರಗಳ ಚಿತ್ತಾರಗಳ ಮಿನುಗಿಸಿದೆ..
ನಿನ್ನ ಮರೆತರೆ ಈ ದೇಶ ಉಳಿವುದೇ..?
ನೀನೆ ನಮ್ಮ ಕಾರ್ಗತ್ತಲ ಬದುಕಿನ ದೀಪವಲ್ಲವೆ?

ಅವ್ವ ನನ್ನವ್ವ..

ಮಬ್ಬಲ್ಲಿಟ್ಟ ಮಹಿಳಾ ಲೋಕಕ್ಕೆ
ಸೂರ್ಯಚಂದ್ರರ ತೋರಿದ ಮಾತೆ ನೀನಲ್ಲವೆ..?
ಹರಿದು ಹಂಚಿದ ಹೆಣ್ಣು ಹೃದಯಗಳನ್ನು
ಬೆರೆಸಿ ಹೊಲಿದ ಹೆತ್ತಮ್ಮ ನೀನಲ್ಲವೆ..?

ಅವ್ವ ನನ್ನವ್ವ..

ಸ್ತ್ರೀಯೆಂದರೆ ನೆಲನೋಡಿ ನಡೆಯಬೇಕೆಂದ ಲೋಕಕ್ಕೆ
ತಲೆಯೆತ್ತಿ, ಎದೆಯೆತ್ತಿ ನಡೆಯಲು ಕಲಿಸಿದ ಧೀರೆ ನೀನಲ್ಲವೆ..?
ಬಂಗಾರದ ಪಂಜರದಲ್ಲಿಟ್ಟ ‘ಅಬಲೆ’ಯನ್ನು
‘ಸಬಲೆ’ ಗೊಳಿಸಿ ಆಕಾಶಕೆ ಚಿಮ್ಮಿಸಿದ ಮಹಾಮಾತೆ ನೀನಲ್ಲವೆ..?

ಅವ್ವ ನನ್ನವ್ವ..

ನಂಗೇಲಿ, ಪಾತಿಮಾ,  ರಮಾಬಾಯಿ ಮಹದೇವಿಯಕ್ಕಗಳ
ಗಜಬಲಪಡೆದು,
ಪುರುಷ ಅಹಮ್ಮಿಗೆ ಚಟ್ಟ ಕಟ್ಟಲು ಹೊರಟ ವೀರವನಿತೆ ನೀನಲ್ಲವೆ..?
ನಿನ್ನ ಮರೆತರೆ ಹೆಣ್ಣಕುಲಕ್ಕೆ ಉಳಿವುಂಟೆ..?
ನಮ್ಮ ಬರಡು ಎದೆಗಳನ್ನು ಉತ್ತು, ಅಕ್ಷರವ ಬಿತ್ತಿ,
ಅನ್ನಗಳಿಸುವ ಮಾರ್ಗ ತೋರಿದ ಭೂತಾಯಿ ನೀನಲ್ಲವೆ?

ಅವ್ವ ನನ್ನವ್ವ..

  ಡಾ. ಸಿ.ಎಸ್.ದ್ವಾರಕಾನಾಥ್, ಬೆಂಗಳೂರು                     —–