ಅನುದಿನ ಕವನ-೧೧೦೬, ಕವಿ: ಶಂಕರಾನಂದ ಹೆಬ್ಬಾಳ್, ಇಳಕಲ್, ಕಾವ್ಯ ಪ್ರಕಾರ: ಗಝಲ್

ಗಝಲ್

ಮಡುಗಟ್ಟಿದ ಕಳವಳದಲಿ ಹೆಣ್ಮನವು
ಕೊರಗುತಿದೆ ಕೇಳು ನೀನು
ನಡುಗುತಿಹ ಮನದಲ್ಲಿ ರೋಷವದು
ಎರಗುತಿದೆ ಕೇಳು ನೀನು

ಎದೆಯಲ್ಲಿನ ಕಿಚ್ಚಿದು ಕಾವಲಿಯಂತೆ
ಕಾದು ನಿಂತಿದೆಯೇಕೆ
ಕದನಗೈಯದ ಜೀವವು ನೋವಿನಲಿ
ಸೊರಗುತಿದೆ ಕೇಳು ನೀನು

ಕೋಟೆಯಲಿ ಏಕಾಂತದಿ ಕಳೆದಿಹ
ದಿನಗಳು ಲೆಕ್ಕಕ್ಕಿಲ್ಲ
ಸೆಟೆಯನಾಡದ ಹೃದಯ ಅಹರ್ನಿಶಿ
ಮರುಗುತಿದೆ ಕೇಳು ನೀನು

ತೆರೆದಿಹ ದ್ವಾರದಲಿ ಭಾವನೆಗಳಿಗೆ
ದಾರಿ ಇಲ್ಲದಾಯಿತೇ
ಮರೆತಿರುವ ಒಲವಿದು ನರಕದೊಳು
ಒರಗುತಿದೆ ಕೇಳು ನೀನು

ಒಳಗಿನ ತಲ್ಲಣವಿದು ಅಭಿನವನ
ಸಂಗವನು ಬಯಸೀತು
ಸುಳಿಯಲಿ ಸಿಲುಕಿದ ಜೀವನನೌಕೆಯು
ತಿರುಗುತಿದೆ ಕೇಳು ನೀನು


-ಶಂಕರಾನಂದ ಹೆಬ್ಬಾಳ, ಇಳಕಲ್
—–