ಅನುದಿನ‌ ಕವನ-೧೧೦೮, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು

ಎಸೆದ ಬಾಟಲಿಯಲ್ಲುಳಿದ
ಚೂರೇ ಚೂರು ನೀರಿನಲ್ಲಿ
ಈಗ ಹುಳು

ಸಿಂಕಿನ ಗಂಟಲು ಕಟ್ಟಿಸಿದೆ
ತಟ್ಟೆಯಲ್ಲುಳಿದ
ಕೊನೆಯ ತುತ್ತು

ತೆಗೆಯಲಾಗದ
ಮುಳ್ಳಿನ ಮೊನೆ
ಕಾಲಲ್ಲಿ ಆಣೆ

ಎಳನೀರ ಚಿಪ್ಪಿನಲ್ಲಿ
ತಿನ್ನದೇ ಬಿಟ್ಟ ಗಂಜಿ
ಕೊಳೆತು ವಾಸನೆ

ಕಟ್ಟದೇ ಬಿಟ್ಟ
ಸಾಲದ ಕೊನೆಯ ಕಂತು
ಬೆಳೆಯುತ್ತಿದೆ
ಬಡ್ಡಿಗೆ ಬಡ್ಡಿ

ಹೋದವರಿಗೆ
ಹೇಳದೇ ಉಳಿದ
ಕೊನೆಯ ಮಾತಿನಂತೆ

-ದುಡ್ಡನಹಳ್ಳಿ ಮಂಜುನಾಥ್, ತುಮಕೂರು