ಬಟ್ಟೆಯೇಕೆ ಬಯಲಿಗೆ!?
ಬತ್ತಲನುಟ್ಟು ಬಟ್ಟೆದೋರಿದೆ
ಬಟ್ಟೆಯನುಟ್ಟು ಬತ್ತಲಾದೆ
ಇದು ಕಾರಣವಾಗಿ
ನೆಲಕೆ ಮರುಳು ಕೈತುಂಬ ಕೆಸರು
ಬತ್ತಲ ಮುಂದೆ ಬಟ್ಟೆ ಕುಣಿತ
ಊರ ತುಂಬಾ ನೆತ್ತರು
ದೊರೆಯ ಮೈಗೆ ಅತ್ತರು
ಹಸಿದ ಕರುಳಿನ ಮುಂದೆ ಚಿನ್ನದಂಗಡಿ
ಮಿಥುನಕೊಡ್ಡುವ
ಹಾಸುಗೆ ಮೇಲೆ ಅರಗಿನ ಗೊಂಬೆ
ಸಿಗರೇಟಿನ ತುಟಿಗೆ ಬಲು ತುಟ್ಟಿ ಒಲವು
ಅಜರಾಮರ ಶಾಸನದಲಿ
ಕುರುಡು ಲಿಪಿಗಳನಿಟ್ಟು
ಅಕ್ಷರ ಕಲಿಸಿದ ಮೇಷ್ಟ್ರು
ವಾಕ್ಯ ರಚನೆ ಮರೆತರು
ನಾನೋ
ಇರುಳ ಚಳಿಗೆ ಹೊತ್ತಗೆಯುರಿಸಿ
ಚುಕ್ಕೆ ಚುಕ್ಕೆಗೆ ಗೆರೆ ಬರೆದು
ನಿನ್ನ ತಾಣ ಬೆದಕಿದೆ
ಹಗಲು ಸತ್ತು ಇರುಳು ಸತ್ತು
ಬೆಳಕಿನೊಳಗೆ ಬೆಳಕು ಮೊಳೆತು
ನೀನು ಬೇರು ನಾನು ಹೂವು
ಬಟ್ಟೆಯೇಕೆ ಬಯಲಿಗೆ!?
-ಮಲ್ಲಿಕಾರ್ಜುನಗೌಡ ತೂಲಹಳ್ಳಿ
—–