ತಪ್ಪುಗಳಿಗೆಲ್ಲ ಶಿಕ್ಷೆಯಾಗುವಂತಿದ್ದರೆ
ಭಾವನೆಗಳ ಕತ್ತು ಹಿಸುಕಿದ್ದಕ್ಕೆ
ಲೆಕ್ಕವಿಲ್ಲದಷ್ಟು ಬಾರಿ
ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು.
ಎಲ್ಲವನ್ನು ಕ್ಷಮೆಯಾಚಿಸಿ
ಸರಿಪಡಿಸಿಕೊಳ್ಳುವಂತಿದ್ದರೆ
ದಿನವೆಲ್ಲ ಕ್ಷಮಿಸುವುದರಲ್ಲೇ
ಕಳೆದುಹೋಗುತ್ತಿತ್ತು.
ನಿಂತ ಮನದಲ್ಲಿ
ಗಟ್ಟಿತನವಿದ್ದಿದ್ದರೆ
ಕಾಲಿನಡಿಯ ಹುಸಿಮಣ್ಣು ಸಹ
ಜಾರದಂತೆ ನೋಡಿಕೊಳ್ಳುತ್ತಿತ್ತು.
ಮಂಕು ಕವಿದ ಬೆಳಕಿನಲ್ಲಿ
ದಾರಿ ಕಾಣುವ ತ್ರಾಣವಿದ್ದಿದ್ದರೆ
ಹೆಜ್ಜೆಯೂರಿದ ಕಡೆಯೆಲ್ಲಾ
ಹೆಗ್ಗುರುತು ಮೂಡಿರುತ್ತಿತ್ತು.
ಏನೇನೆಲ್ಲ ಆಗಬಹುದಿತ್ತು
ಆಗದೆಯೂ ಇರಬಹುದಿತ್ತು
ಎಲ್ಲವು ಅರ್ಧಕ್ಕೆ
ಮುಗಿದ ಅಧ್ಯಾಯವಾಗಿ ಹೋಯ್ತು.
-ಸುಹಾಸಿನಿ ಶ್ರೀ, ಬೆಂಗಳೂರು