ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಜಂಟಿ ಸಭೆ : ವಾಣಿಜ್ಯೋದ್ಯಮ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ

ಬಳ್ಳಾರಿ, ಜ. 20: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಜಂಟಿ ಸಭೆಯು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಯಶಸ್ವಿಯಾಗಿ ನೆರವೇರಿತು.
ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಜನಪ್ರಿಯ ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್ ಮತ್ತು ರೈತಣ್ಣನ ಹಾಸಿಗೆ ಸೇವಾ ಯೋಜನೆಗಳಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 30 ಪದಾಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಭೇಟಿ ಮಾಡಿ, ರೈತಣ್ಣನ ಊಟವನ್ನು ಸವಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ್ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರೈತಣ್ಣ ಊಟ, ರೈತಣ್ಣ ಕ್ಲಿನಿಕ್ ದೇಶದಲ್ಲೇ ಗಮನ ಸೆಳೆಯುವ ನಿಸ್ವಾರ್ಥ ಜನಪ್ರಿಯ ಸೇವಾ ಯೋಜನೆಗಳಾಗಿವೆ. ಆಹಾರದ ಗುಣಮಟ್ಟ, ರುಚಿಯಲ್ಲಿ ಉತ್ತಮವಾಗಿದೆ. ಈ ಸಂಸ್ಥೆಯು ಕೇವಲ ವ್ಯಾಪಾರಿಗಳು – ಕೈಗಾರಿಕೋದ್ಯಮಿಗಳ ಹಿತಕ್ಕಾಗಿ ಶ್ರಮಿಸದೇ ದೇಶದ ಬೆನ್ನೆಲುಬಾಗಿರುವ ರೈತರ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರ ಒಪ್ಪತ್ತಿನ ಊಟದ ಬಗ್ಗೆ ಚಿಂತನೆ ಮಾಡಿರುವುದು ಸಂಸ್ಥೆಯ ಮಾನವೀಯತೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ್ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಬಡ ಮತ್ತು ಮಧ್ಯಮವರ್ಗದ ಯುವಶಕ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ – ಸದೃಢವಾದ ಆರೋಗ್ಯವಂತ ಜೀವವನ್ನು ರೂಪಿಸಿಕೊಳ್ಳುವ ರೀತಿಯಲ್ಲಿ ವೃತ್ತಿ ಕೌಶಲ್ಯವನ್ನು ಮತ್ತು ವ್ಯಕ್ತಿತ್ವ ಮಾರ್ಗದರ್ಶವನ್ನು ನೀಡುವ ಜವಾಬ್ದಾರಿಯುತ ಕೆಲಸ ನಡೆದಿದೆ. ಸಂಸ್ಥೆಯ ಸದಸ್ಯರ ಬದ್ಧತೆ, ಶ್ರಮಕ್ಕೆ ಈ ಸಂಸ್ಥೆಯ ಪದಾಧಿಕಾರಿಗಳ ದೂರದೃಷ್ಠಿಯೇ ಕಾರಣ ಎಂದು ಶ್ಲಾಘಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಭವನದಲ್ಲಿ ನಡೆದ ಜಂಟಿ ಸಭೆಯಲ್ಲಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ, ವಿವಿಧ ಸೇವೆಗಳ ಕುರಿತು ಹಿರಿಯ ಉಪಾಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ಗೌರವಾಧ್ಯಕ್ಷರಾದ ಸಿ. ಶ್ರೀನಿವಾಸರಾವ್ ಅವರು
ಕೈಗಾರಿಕೆಗಳನ್ನು ಬೆಂಗಳೂರಿನ ಹೊರತಾಗಿ ಸ್ಥಾಪಿಸಲು ಪ್ರಯತ್ನ ಮಾಡಬೇಕು ಎಂದರು.
ಸಿಎ ಕೆ. ರಾಜಶೇಖರ್ ಅವರು ಜಿಎಸ್ಟಿ ಮತ್ತು ತೆರಿಗೆ ಇಲಾಖೆಗಳ ಕುರಿತು ವಿವರಿಸಿದರು. ಹಿರಿಯ ಸದಸ್ಯ ವಿ. ರವಿಕುಮಾರ್ ಅವರು ರೈಲ್ವೆ ಮಾರ್ಗಗಳು ಮತ್ತು ರೈಲ್ವೆಯ ಅಭಿವೃದ್ಧಿಗಳ ಕುರಿತು, ವಿ.ರಾಮಚಂದ್ರ ಅವರು ಎಪಿಎಂಸಿ ರಿಟೈಲ್ ವ್ಯಾಪಾರಿಗಳು ಎದರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಎಸ್.ಪಿ. ವೆಂಕಟೇಶ್ ಅವರು ಸ್ಪಾಂಜ್ ಐರನ್ ಓರ್ ಸಮಸ್ಯೆಗಳ ಕುರಿತು ಮಾತನಾಡಿದರು.
ಬಿ.ಮಹಾರುದ್ರಗೌಡ ಅವರು, ಎಪಿಎಂಸಿಯಲ್ಲಿ ಲೀಸ್ ಕಂ ಸೇಲ್ ಡೀಡ್ ಅಡಿಯಲ್ಲಿ ಅಂಗಡಿ ಮಳಿಗೆಯನ್ನು ಪಡೆದವರು ಸ್ಥಳೀಯ ಸಂಸ್ಥೆಯ ಆಸ್ತಿ ತೆರಿಗೆಯನ್ನು ಪಾವತಿಸುವ ಕುರಿತು ಸಾಕಷ್ಟು ಗೊಂದಲಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ್ ಅವರು ಪ್ರತಿಕ್ರಿಯಿಸಿ, ಸರ್ಕಾರಕ್ಕೆ ವಿಷಯ ತಲುಪಿಸಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಸ್ವಾಗತಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಜಂಟಿ ಸಭೆಯ ಮಹತ್ವದ ಕುರಿತು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದಿಸಿದರು.
ಉಪಾದ್ಯಕ್ಷರಗಳಾದ ಎ.ಮಂಜುನಾಥ, ಎಸ್.ದೊಡ್ಡನಗೌಡ, ಸೊಂತ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಖಜಾಂಚಿ ಪಿ.ಪಾಲಣ್ಣ, ಜಂಟಿ ಖಜಾಂಚಿ ನಾಗಳ್ಳಿ ರಮೇಶ, ಕಾರ್ಯಕಾರಿ ಸಮಿತಿ ಸದಸ್ಯರು, ಉಪಕಮಿಟಿ ಚೇರ್ಮನಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು. ಹಾಗೂ ವಿವಿಧ ಸಂಘ ಅಧ್ಯಕ್ಷರು, ಗೌರವಕಾರ್ಯದರ್ಶಿಗಳು ಪಧಾದಿಕಾರಿಗಳು ಉಪಸ್ಥಿತರಿದ್ದರು.
*****