ಗಜ಼ಲ್
ಹಂಚುವುದಾದರೆ ಹಂಚು ಎದೆಯೊಳಗಿನ ಪ್ರೀತಿ ಕಕ್ಕಬೇಡ ಹಾವಿನಂತೆ ವಿಷವನ್ನು
ಹಚ್ಚುವುದಾದರೆ ಹಚ್ಚು ಒಲವಿನ ಹಣತೆ ಹಂಚಬೇಡ ಅಮವಾಸ್ಯೆ ಕತ್ತಲನ್ನು
ಕೈತುತ್ತು ಕೊಟ್ಟವರ ಕೈಹಿಡಿದೆತ್ತಿ ನಡಿಗೆ ಕಲಿಸಿದವರ ನೆನಪಿಸಿಕೋ
ಹೇಳುವುದಾದರೆ ಹೇಳು ಎದೆತುಂಬಿ ಧನ್ಯವಾದ ಹೇಳಬೇಡ ಇತರರಿಗೆ
ಇಲ್ಲಸಲ್ಲದ್ದನ್ನು
ಬದುಕಿದು ಬಹಳಷ್ಟು ಜನರ ಋಣದ ಘನ ಗೌಣವಾಗದಿರು ಮರೆತು
ಸ್ಮರಿಸುವುದಾದರೆ ಸ್ಮರಿಸು ಪಡೆದ ಉಪಕಾರಗಳ ಮಾಡಬೇಡ ದೂಷಣೆಯನ್ನು
ಹೊಟ್ಟೆತುಂಬ ಉಂಡು ಉಂಡ ಅನ್ನದ ಮೇಲೆಯೇ ಹೆಸರಿಡುವುದು ಹೇಯಕರ
ಹೇಳದಿದ್ದರೂ ಸರಿ ಹೆಸರು ಬಿಟ್ಟುಬಿಡು ಆಡಿಕೊಳ್ಳಬೇಡ ಅನ್ನವಿಕ್ಕಿದ ಕೈಗಳನ್ನು
ಒಂದು ರೊಟ್ಟಿ ತಿಂದ ನಾಯಿಗೂ ಇರುತ್ತೆ ನಿಯತ್ತು ಅದಕ್ಕಿಂತ ಕೀಳಾಗಬೇಡ
‘ನಾಗೇಶಿ’
ಮಾಡುವುದಿದ್ದರೆ ಒಳಿತನ್ನೇ ಮಾಡು ಆಗದಿದ್ದರೆ ಸುಮ್ಮನಿರು ಬಯಸದಿರು
ಕೆಡುಕನ್ನು
-ನಾಗೇಶ್ ಜೆ. ನಾಯಕ, ಸವದತ್ತಿ
—–