ಅನುದಿನ ಕವನ-೧೧೧೭, ಕವಿ: ಕಿರಣ್ ಗಿರ್ಗಿ, ಚಾಮರಾಜ ನಗರ, ಕವನದ ಶೀರ್ಷಿಕೆ: ನಮ್ಮ ಊರಿನ ರಾಮನು

ನಮ್ಮ ಊರಿನ ರಾಮನು

ನಮ್ಮ ಊರಿನ ರಾಮನು
ಕಟ್ಟಿ ನೊಗವ ಉತ್ತು ಹೊಲವ
ಊರಿಗೆಲ್ಲ ಹಂಚುತಿಹನು
ತಾನು ಬೆಳೆದ ಫಸಲನು

ಭೂಮಿಯನ್ನೇ ದೇವರೆಂದು
ನೇಗಿಲು ಹಿಡಿದ ರಾಮನು
ನಿತ್ಯ ದುಡಿವ ಶ್ರಮಿಕನು
ಗ್ರಾಮ ಮೆಚ್ಚುವ ರೈತನು

ಜಗಳವಾಡದ ಜಾಣನು
ಜರಿಯಲಾರ ಯಾರನು
ಹೃದಯವಂತ ರಾಮನು
ದೂರ ತಳ್ಳನು ಯಾರನು

ಅನಕ್ಷರಸ್ಥ ರಾಮನು
ಕಪಟವಿಲ್ಲದ ಮನುಜನು
ಎಲ್ಲರಿಗೂ ಸನ್ಮಿತ್ರನು
ಜಗಕೆ ಅನ್ನದಾತನು

ಪ್ರೀತಿ ನೀಡುವ ಅಪ್ಪನು
ವಿನಯವಂತ ರಾಮನು
ತಾಯಿ ಮಡದಿಗೆ ಪ್ರಿಯನು
ಹಟ್ಟಿ ಹೈಕಳ ಪೊರೆವನು

ಗುಡಿಸಲಿನ ರಾಜನಿವನು
ತಂಗಳುಂಡು ಗೆಯ್ಯುತಿಹನು
ಸ್ವಾಭಿಮಾನಿ ರಾಮನು
ದಲಿತ ಕೇರಿಯ ಶ್ರೀಸಾಮಾನ್ಯನು

ಇವನು
ನಮ್ಮ ಊರಿನ ರಾಮನು!

– ಕಿರಣ್ ಗಿರ್ಗಿ, ಚಾಮರಾಜ ನಗರ